ಬೆಂಗಳೂರು: ಮಾದಕ ದ್ರವ್ಯ ಜಾಲ ಪ್ರಕರಣದಲ್ಲಿ ಆರನೇ ಆರೋಪಿಯಾಗಿ ಹೆಸರಿಸಲಾಗಿರುವ ಆದಿತ್ಯ ಆಳ್ವಾ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆ ಕೂಡ ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಆದಿತ್ಯ ಆಳ್ವಾ ಮುಂಬೈ ಮತ್ತು ಬೆಂಗಳೂರಿನಲ್ಲಿ ಅತ್ಯುನ್ನತ ಮಟ್ಟದಲ್ಲಿ ನೆಟ್ ವರ್ಕ್ ಹೊಂದಿದ್ದಾನೆ.
ಅವರ ತಂದೆ ಜೀವರಾಜ್ ಆಳ್ವಾ, ರಾಜ್ಯದ ಹಲವು ಹಾಲಿ ರಾಜಕಾರಣಿಗಳ ಪರಮಾಪ್ತ ಗೆಳೆಯರಾಗಿದ್ದರು. ಇದು ಕೂಡ ತೆರೆ ಮರೆಯಲ್ಲಿ ಆದಿತ್ಯ ಆಳ್ವಾ ಅವರ ನೆರವಿಗೆ ಬಂದಿದೆ ಎನ್ನಲಾಗಿದೆ. ಯಲಹಂಕ ಬಳಿ ನಾಲ್ಕು ಎಕರೆ ವಿಸ್ತಾರದಲ್ಲಿ ಇರುವ ಕಟ್ಟಡವನ್ನು ರೆಸಾರ್ಟ್ ರೀತಿಯಲ್ಲಿ ಆದಿತ್ಯ ಆಳ್ವಾ ಬಳಸಿಕೊಳ್ಳುತ್ತಿದ್ದ ಎಂದು ವರದಿಯಾಗಿದೆ.
ದಿನಕ್ಕೆ ಕನಿಷ್ಟ ಎರಡು ಪಾರ್ಟಿಗಳನ್ನು ಆದಿತ್ಯ ಆಳ್ವಾ ಆಯೋಜಿಸುತ್ತಿದ್ದ ಎಂದು ವರದಿಯಾಗಿದೆ. ಐಟಿ ಮತ್ತು ವಿದೇಶಿಯರು ಈತನ ಪ್ರಮುಖ ಟಾರ್ಗೇಟ್ ಆಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಕೂಡ ಆದಿತ್ಯ ಆಳ್ವಾ ಈ ರೆಸಾರ್ಟ್ ನಲ್ಲಿ ಪಾರ್ಟಿ ಆಯೋಜಿಸಿದ್ದ ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಈ ರೆಸಾರ್ಟ್ ನೋಡಿಕೊಳ್ಳುತ್ತಿದ್ದ ರಾಮ ದಾಸ್ ಎಂಬವರನ್ನು ಸಿಸಿಬಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದಾರೆ. ಇನ್ನೊಂದೆಡೆ ಮಾದಕ ದ್ರವ್ಯ ಹಗರಣ ಸಂಬಂಧ ಸಿಸಿಬಿ ಪೊಲೀಸರು ಹುಬ್ಬಳಿಯಲ್ಲಿ ಕೂಡ ಶೋಧ ನಡೆಸಿದ್ದಾರೆ. ಕಾಂಗ್ರೆಸ್ ಮುಖಂಡರೊಬ್ಬರಿಗೆ ಸೇರಿದ ಫಾರ್ಮ್ ಹೌಸ್ ನಲ್ಲಿ ಶೋಧ ನಡೆಸಲಾಗಿದೆ ಎಂದು ವರದಿಯಾಗಿದೆ.