ಬೆಂಗಳೂರು: ನಟಿ ರಾಗಿಣಿ ಬಂಧನವಾದ ಕೂಡಲೇ ಮುಂದಿನ ಸರದಿ ಯಾರದು ಎಂಬ ಪ್ರಶ್ನೆ ಸಹಜವಾಗಿ ಉದ್ಬವಿಸಿತ್ತು. ಯಾಕೆಂದರೆ ನಟಿ ರಾಗಿಣಿ ಹೆಚ್ಚಿನ ಸಂದರ್ಭದಲ್ಲಿ ಒಬ್ಬರೇ ಪಾರ್ಟಿ ಮಾಡುತ್ತಿರಲಿಲ್ಲ, ತಮ್ಮ ಸಮಾನ ಮನಸ್ಕ ಸ್ನೇಹಿತರ ಜತೆ ಪಬ್ ಗಳಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಅವರ ಆಪ್ತ ಸ್ನೇಹಿತರ ಬಳಗದ ಚಟುವಟಿಕೆಯನ್ನು ಸಿಸಿಬಿ ನಿಕಟವಾಗಿ ಗಮನಿಸುತ್ತಿತ್ತು. ಮಾಹಿತಿ ಕಲೆಹಾಕುತ್ತಿತ್ತು.
ಇದೀಗ ಈ ಎಲ್ಲ ಬೆಳವಣಿಗೆ ಬಳಿಕ ಸಿಸಿಬಿ ನಟಿ ಐಂದ್ರಿತಾ ರೇ ಅವರಿಗೆ ನೋಟಿಸ್ ಜಾರಿಮಾಡಿದೆ. ಕನ್ನಡದ ಇತರ ನಟಿಯರಿಗೆ ಹೋಲಿಸಿದರೆ ಐಂದ್ರಿತಾ ಅವರಿಗೆ ಮುಂಬೈ ಸಂಪರ್ಕ ಹೆಚ್ಚಾಗಿದೆ. ಅರ್ಬಾಜ್ ಖಾನ್ ಜತೆ ಅವರು ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಚಿತ್ರದ ಪ್ರಮೋಷನ್ ಗಾಗಿ ಕೊಲಂಬೋಕ್ಕೆ ಭೇಟಿ ನೀಡಿದ್ದನ್ನು ಐಂದ್ರಿತಾ ಈ ಹಿಂದೆ ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಕೊಲಂಬೋ ಭೇಟಿ ವೇಳೆ ಡ್ರಗ್ಸ್ ಪೆಡ್ಲರ್ ಶೇಕ್ ಪಾಝಿಲ್ ಜತೆ ಅವರು ಕಾಣಿಸಿಕೊಂಡಿದ್ದ ಚಿತ್ರ ಕೂಡ ಇತ್ತೀಚೆಗೆ ವೈರಲ್ ಆಗಿತ್ತು.
ನಟಿ ಐಂದ್ರಿತಾ ಮಾದಕ ದ್ರವ್ಯ ಜಾಲದಲ್ಲಿ ಯಾವ ರೀತಿ ಶಾಮೀಲಾಗಿದ್ದರು. ಅವರು ಇತರರಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದರೇ,,ಹಾಗಿದ್ದರೆ ಅವರ ಜತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಯಾರು.. ಮುಖ್ಯವಾಗಿ ಆರೋಪಿ ಶೇಕ್ ಪಾಝಿಲ್ ಜತೆ ಐಂದ್ರಿತಾ ವ್ಯಾವಹಾರಿಕ ಸಂಬಂಧ ಹೊಂದಿದ್ದರೆ.. ಈ ಎಲ್ಲ ಅಂಶಗಳ ಬಗ್ಗೆ ಸಿಸಿಬಿ ಅಧಿಕಾರಿಗಳು ಐಂದ್ರಿತಾ ರೇ ಅವರನ್ನು ವಿಚಾರಣೆಗೆ ಗುರಿಪಡಿಸುವ ಸಾಧ್ಯತೆಯಿದೆ.