ಬೆಂಗಳೂರು: ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಬಿಜೆಪಿ ಸರ್ಕಾರದ ವಿರುದ್ಧವೇ ಪ್ರತಿಭಟನೆ ಆರಂಭಿಸಿದ್ದಾರೆ. ಅತಿಥಿ ಉಪನ್ಯಾಸಕರ ವೇತನ ವಿಚಾರದಲ್ಲಿ ಶಿಕ್ಷಣ ಸಚಿವರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಪ್ರತಿಭಟನೆ ಆರಂಭಿಸಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲ ನೀಡಿದೆ.
ಶೂನ್ಯವೇಳೆಯಲ್ಲಿ ಅತಿಥಿ ಉಪನ್ಯಾಸಕರ ವಿಚಾರದಲ್ಲಿ ಸರ್ಕಾರದ ಧೋರಣೆ ಖಂಡಿಸಿದ ಆಯನೂರು ಮಂಜುನಾಥ್, ಲಾಕ್ ಡೌನ್ ಅವಧಿಯಲ್ಲಿ ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ರಾಜ್ಯದಲ್ಲಿ ಈ ಆದೇಶ ಪಾಲನೆಯಾಗಿಲ್ಲ. ಅಲ್ಲದೇ ಲಾಕ್ ಡೌನ್ ಆರಂಭದಲ್ಲೇ ಅತಿಥಿ ಉಪನ್ಯಾಸಕರನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಯಿತು ಎಂದು ಸದನಕ್ಕೆ ಶಿಕ್ಷಣ ಸಚಿವರು ಸುಳ್ಳು ಹೇಳಿದ್ದಾರೆ ಎಂದು ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
ಉನ್ನತ ಶಿಕ್ಷಣ ಸಚಿವರಿಂದ ಬುಧವಾರ ಉತ್ತರ ಕೊಡಿಸುವುದಾಗಿ ಸಭಾನಾಯಕ ಕೋಟ ಶ್ರೀನಿವಾಸ್ ಪೂಜಾರಿ ಭರವಸೆ ನೀಡಿದರೂ ಆಯನೂರು ಒಪ್ಪಿಕೊಳ್ಳದೇ ಸಭಾಪತಿ ಪೀಠದ ಎದುರು ಧರಣಿ ಆರಂಭಿಸಿದರು. ಈ ಧರಣಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬೆಂಬಲಿಸಿದರು. ಬಳಿಕ ಪರಿಷತ್ ಕಲಾಪವನ್ನು 20 ನಿಮಿಷಗಳ ಅವಧಿಗೆ ಮುಂದೂಡಲಾಯಿತು.
ಬಿಜೆಪಿ ವಿರುದ್ಧ ಆಯನೂರು ಮಂಜುನಾಥ್ ಪ್ರತಿಭಟನೆ
Follow Us