ಬೆಂಗಳೂರು: ನಗರದಲ್ಲಿ ಫೆ. 26ರಿಂದ ಮಾ. 4ರವರೆಗೆ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆಯಲಿದ್ದು, 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಚಿತ್ರೋತ್ಸವದಲ್ಲಿ ಹಿರಿಯ ನಟ ಅನಂತ್ ನಾಗ್ ಅವರ ಚಿತ್ರಗಳ ಪುನರಾವಲೋಕನ ನಡೆಯಲಿದೆ.
ಫೆ. 26ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ನಗರದ ರಾಜಾಜಿನಗರದ ಒರಾಯನ್ ಮಾಲ್ ಪಿವಿಆರ್ ಸಿನಿಮಾದ 11 ಪರದೆಗಳು, ನವರಂಗ್ ಚಿತ್ರಮಂದಿರ, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟಡದಲ್ಲಿನ ರಾಜ್ ಭವನ, ಸುಚಿತ್ರ ಚಿತ್ರ ಮಂದಿರಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ .
ಭಾರತೀಯ ಸಂಗೀತ ಪರಂಪರೆ ಮತ್ತು ಸಿನಿಮಾ ವಿಷಯಾಧಾರಿತ ವಿಭಾಗದಲ್ಲಿ
ತ್ಯಾಗರಾಜರು, ಪುರಂದರದಾಸರು, ಸ್ವಾತಿ ತಿರುನಾಳ್, ತಾನಸೇನ್, ಮೀರಾ ಸೇರಿದಂತೆ ಹಲವು ಸಂಗೀತ ಪ್ರದಾನ
ಚಿತ್ರಗಳು ಪ್ರದರ್ಶನಗೊಳ್ಳಲಿವೆ.