newsics.com
ಬೆಂಗಳೂರು: ನಗರದ ಬಿನ್ನಿಪೇಟೆ ಬಳಿ ಇರುವ ಪೊಲೀಸ್ ವಸತಿ ಸಮುಚ್ಛಯ ಕೂಡ ವಾಲಿದ್ದು, ಕುಸಿಯುವ ಭೀತಿ ಹುಟ್ಟಿಸಿದೆ.
ಆದರೂ, ಈ ಕಟ್ಟಡಗಳಲ್ಲಿ ವಾಸವಿರುವ ಪೊಲೀಸ್ ಸಿಬ್ಬಂದಿಯನ್ನು ತೆರವುಗೊಳಿಸುವ ಕಾರ್ಯ ಕ್ಷಿಪ್ರವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ.
ಮೂರು ವರ್ಷಗಳ ಹಿಂದೆ ರಾಜ್ಯ ಗೃಹ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಕ್ವಾಟ್ರರ್ಸ್ ಪೊಲೀಸ್ ಸಿಬ್ಬಂದಿಗೆ ಕೊಡಮಾಡಿರುವ ಮನೆಗಳು. ಇಲ್ಲಿ ಒಟ್ಟು 6 ಕಟ್ಟಡಗಳಿವೆ. ಒದೊಂದು ಕಟ್ಟಡದಲ್ಲಿ ಸುಮಾರು 36 ಮನೆಗಳಿವೆ. ಈ ಪೈಕಿ ಈ ಕ್ವಾಟರ್ಸ್ನ ಬಿ ಬ್ಲಾಕ್ ಬಲಭಾಗಕ್ಕೆ ವಾಲಿಕೊಂಡಿದೆ. ಸಿ ಬ್ಲಾಕ್ ಗೆ ಅಂಟಿಕೊಂಡೇ ಇರುವ ಬಿ ಬ್ಲಾಕ್ ಸಿ ಬ್ಲಾಕ್ನಿಂದ ಸುಮಾರು ಆರೂವರೆ ಇಂಚಿನಷ್ಟು ಬೇರ್ಪಟ್ಟು ಆತಂಕ ಹುಟ್ಟಿಸಿದೆ.
ಪೊಲೀಸ್ ಕ್ವಾಟ್ರಸ್ ಇರುವ ಈ ಜಾಗ ಮೊದಲು ಕೆರೆಯಾಗಿತ್ತು. ಬಿಬಿಎಂಪಿ ಇದನ್ನು ಲ್ಯಾಂಡ್ ಫಿಲ್ಲಿಂಗ್ ಮಾಡಿಕೊಂಡಿತ್ತು. ಆದರೆ ನಗರದ ಹೃದಯ ಭಾಗದಲ್ಲೇ ಪೊಲೀಸ್ ಇಲಾಖೆಗೆ ಒಂದು ಕ್ವಾಟರ್ಸ್ ಬೇಕು ಎನ್ನುವ ಕಾರಣಕ್ಕೆ ಕೆರೆ ಮಣ್ಣು ತುಂಬಿ ಈ ಕ್ವಾಟ್ರರ್ಸ್ ನಿರ್ಮಾಣ ಮಾಡಲಾಗಿದೆ. ಬಿಬಿಎಂಪಿ ಅಧಿಕಾರಿಗಳು ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.