newsics.com
ಬೆಂಗಳೂರು: ಆರೋಪಿಗಳ ಗಮನಕ್ಕೆ ತರದೆ ತನಿಖಾ ಅವಧಿ ವಿಸ್ತರಿಸಿದ ಹಿನ್ನೆಲೆಯಲ್ಲಿ ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ 115 ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ತಮಗೆ ಯಾವುದೇ ಮಾಹಿತಿ ನೀಡದೆ ಪ್ರಕರಣದ ತನಿಖೆ ಪೂರ್ಣಗೊಳಿಸಲು ವಿಚಾರಣಾ ನ್ಯಾಯಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) 90 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಇದು ನಿಯಮಬಾಹಿರ. ಹೀಗಾಗಿ ತಮಗೆ ಡಿಫಾಲ್ಟ್ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಪ್ರಕರಣದ ಆರೋಪಿಗಳಾದ ಮುಜಾಮಿಲ್ ಸೇರಿದಂತೆ 115 ಆರೋಪಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ಪೀಠ, ತನಿಖಾ ಅವಧಿ ವಿಸ್ತರಿಸಿ ಎನ್ಐಎ ವಿಶೇಷ ನ್ಯಾಯಾಲಯ ಹೊರಡಿಸಿರುವ ಆದೇಶ ಕಾನೂನುಬಾಹಿರ ಎಂದು ಜಾಮೀನು ಮಂಜೂರು ಮಾಡಿದೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್ ಫೇಸ್ ಬುಕ್ ನಲ್ಲಿ ಹಾಕಿದ್ದ ಪ್ರಚೋದನಾಕಾರಿ ಪೋಸ್ಟ್ ನಗರದ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗಲಭೆಗೆ ಕಾರಣವಾಗಿತ್ತು. ಈ ಸಂಬಂಧ ಆರೋಪಿಗಳನ್ನು 2020ರ ಆಗಸ್ಟ್ 12ರಂದು ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿದ್ದ ಎನ್ಐಎ ನಿಗದಿತ 90 ದಿನಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಈ ಅವಧಿ 2020ರ ನವೆಂಬರ್ 9ಕ್ಕೆ ಮುಗಿದಿತ್ತು.