ಬೆಂಗಳೂರು: ಹಿರಿಯ ಲೇಖಕಿ, ಪತ್ರಕರ್ತೆ ಭಾರತಿ ಹೆಗಡೆಯವರ ‘ಸೀತಾಳೆದಂಡೆಯ ಸದ್ದಿಲ್ಲದ ಕತೆಗಳು’ ಕಥಾಸಂಕಲನ ಭಾನುವಾರ (ಜ.5) ಬೆಳಗ್ಗೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ಬೆಂಗಳೂರು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಿರಿಯ ನಿರ್ದೇಶಕ ಟಿ.ಎನ್. ಸೀತಾರಾಮ್ ಕಥಾಸಂಕಲನ ಬಿಡುಗಡೆಗೊಳಿಸಲಿದ್ದಾರೆ. ಕವಿ, ಚಿಂತಕ ಸುಬ್ಬು ಹೊಲೆಯಾರ್, ಲೇಖಕಿ ಎನ್. ಸಂಧ್ಯಾರಾಣಿ, ಹಿರಿಯ ಲೇಖಕಿ, ಪ್ರಕಾಶಕಿ ಡಾ.ಆರ್. ಪೂರ್ಣಿಮಾ, ಲೇಖಕಿ ಭಾರತಿ ಹೆಗಡೆ ಉಪಸ್ಥಿತರಿರುವರು. ಈ ಕಥಾ ಸಂಕಲನವನ್ನು ಬೆಂಗಳೂರಿನ ವಿಕಾಸ ಪ್ರಕಾಶನ ಹೊರತಂದಿದೆ.
ಕಥಾಸಂಕಲನ ಕುರಿತ ಕಿರು ಯಕ್ಷಗಾನ:
ಪುಸ್ತಕ ಬಿಡುಗಡೆಗೂ ಮುನ್ನ ಸೀತಾಳೆ ಮನೋವ್ಯಾಪಾರದ ಕುರಿತ ಕಿರು ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಎ.ಪಿ. ಪಾಠಕ್ ಅವರ ಭಾಗವತಿಕೆಯಲ್ಲಿ ಯಕ್ಷ ಕಲಾವಿದ ಶಿಶಿರ ಸುವರ್ಣ ಅಭಿನಯಿಸಲಿದ್ದಾರೆ. ಭಾರತಿ ಹೆಗಡೆಯವರ ಮೂಲ ಪರಿಕಲ್ಪನೆಗೆ ಲೇಖಕ, ಚಿಂತಕ ಡಾ.ದಿವಾಕರ ಹೆಗಡೆ ಯಕ್ಷಗಾನ ರೂಪ ನೀಡಿದ್ದು, ಕಲಾವಿದ ಸಂಜೀವ ಸುವರ್ಣ ನಿರ್ದೇಶಿಸಿದ್ದಾರೆ.