newsics.com
ಬೆಂಗಳೂರು: ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಈ ಬಾರಿ ವಿಶ್ವಪ್ರಸಿದ್ಧ ಹೃದಯರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಉದ್ಘಾಟಿಸಲಿದ್ದಾರೆ.
ಡಾ.ಸಿ.ಎನ್. ಮಂಜುನಾಥ್ ಅವರು ಅ.17ರಂದು ದಸರಾ ಮಹೋತ್ಸವ ಉದ್ಘಾಟನೆ ನೆರವೇರಿಸಲಿದ್ದಾರೆ. ಲಕ್ಷಾಂತರ ಬಡ ಹೃದ್ರೋಗಿಗಳ ಜೀವ ಹಾಗೂ ಸಂಸಾರಗಳನ್ನು ಉಳಿಸಿ ಬದುಕು ಕೊಟ್ಟು ಸಾವಿರಾರು ಜನಕ್ಕೆ ಉದ್ಯೋಗ ಕೊಟ್ಟು ಜೀವನ ರೂಪಿಸಿದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಅವರಿಂದ ಈ ಬಾರಿಯ ದಸರಾ ಮಹೋತ್ಸವ ಉದ್ಘಾಟಿಸಲು ಸರ್ಕಾರ ನಿರ್ಧರಿಸಿದೆ.
ಮೈಸೂರು ಅರಮನೆಯ ರತ್ನಖಚಿತ ಸಿಂಹಾಸನ ವೀಕ್ಷಣೆಗೆ ಅವಕಾಶ
ಸರ್ಕಾರಿ ಆಸ್ಪತ್ರೆಯನ್ನು ಹೈಟೆಕ್ ಆಸ್ಪತ್ರೆಯನ್ನಾಗಿ ಮಾಡಿ ಬಡ ಜನರಿಗೆ ಚಿಕಿತ್ಸೆ ನೀಡುವ ಮೂಲಕ ಜಯದೇವ ಹೃದ್ರೋಗ ಆಸ್ಪತ್ರೆಗೆ ವಿಶ್ವಮನ್ನಣೆ ಗಳಿಸಿದ ಕೀರ್ತಿ ಡಾ.ಸಿ.ಎನ್.ಮಂಜುನಾಥ್ ಅವರಿಗೆ ಸಂದಿದೆ. ಡಾ.ಸಿ.ಎನ್.ಮಂಜುನಾಥ್ ಅವರು ಹೃದ್ರೋಗ ತಜ್ಞರಷ್ಟೇ ಅಲ್ಲ; ಸಾಮಾಜಿಕ ಕಳಕಳಿಯ, ಹೃದಯವಂತ, ಮಾನವತೆಯ ಧೀಮಂತ. ಕೊರೋನಾ ಸಂಕೀರ್ಣದ ಕಾಲದಲ್ಲಿ ಟಾಸ್ಕ್ ಫೋರ್ಸ್ ನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಜನಮನ್ನಣೆ ಗಳಿಸಿದ್ದಾರೆ.
ಈ ಬಾರಿ ಕೊರೋನಾ ವಾರಿಯರ್ಸ್ ಅವರಿಂದ ದಸರಾ ಉದ್ಘಾಟನೆ ಮಾಡಿಸಬೇಕೆಂದು ಮೈಸೂರು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆಗ ಕೊರೋನಾ ವಾರಿಯರ್ ಆಗಿ ಡಾ.ಸಿ.ಎನ್.ಮಂಜುನಾಥ್ ಅವರ ಹೆಸರು ಪ್ರಸ್ತಾಪವಾಯಿತು. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದ ಬಹುತೇಕ ಸದಸ್ಯರು ದಸರಾ ಉದ್ಘಾಟನೆಗೆ ಮಂಜುನಾಥ್ ಅವರ ಬಗ್ಗೆ ಒಲವು ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.