ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಹತ್ತನೇ ತರಗತಿ ಪರೀಕ್ಷೆಯಲ್ಲಿ ಬೆಂಗಳೂರು ಪ್ರಾಂತ್ಯ ಶೇ 98.23 ರಷ್ಟು ಫಲಿತಾಂಶ ಪಡೆಯುವ ಮೂಲಕ ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ.
ಶೇ 99.28ರಷ್ಟು ಫಲಿತಾಂಶ ಪಡೆದಿರುವ ತಿರುವನಂತಪುರ ಪ್ರಾಂತ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಶೇ 98.95ರಷ್ಟು ಫಲಿತಾಂಶ ದಾಖಲಿಸಿರುವ ಚೆನ್ನೈ ಪ್ರಾಂತ್ಯ ಎರಡನೇ ಸ್ಥಾನದಲ್ಲಿದೆ. ಒಟ್ಟು 208 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ಈ ವರ್ಷದಿಂದ ಬೆಂಗಳೂರನ್ನು ಪ್ರತ್ಯೇಕ ಪ್ರಾಂತ್ಯ ಎಂದು ಗುರುತಿಸಲಾಗಿದೆ. ಇಲ್ಲಿನ 971 ಶಾಲೆಗಳಿಂದ 56,226 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 55,230 ಮಂದಿ ತೇರ್ಗಡೆಯಾಗಿದ್ದಾರೆ. ಬೆಂಗಳೂರಿನ ಶಾಲೆಗಳು ಈ ಹಿಂದೆ ದಕ್ಷಿಣ ವಲಯದ ಚೆನ್ನೈ ಪ್ರಾಂತ್ಯಕ್ಕೆ ಸೇರಿದ್ದವು.
ಪದವಿ, ಪಿಜಿ, ಡಿಪ್ಲೊಮಾ ಸೆಮಿಸ್ಟರ್ ಪರೀಕ್ಷಾ ಶುಲ್ಕದಲ್ಲಿ ಶೇ.50 ರಿಯಾಯಿತಿ
ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಪರೀಕ್ಷೆ ಬರೆದ ಶೇ 93.31ರಷ್ಟು ಹುಡುಗಿಯರು ಹಾಗೂ ಶೇ 90.14ರಷ್ಟು ಹುಡುಗರು ಉತ್ತೀರ್ಣರಾಗಿದ್ದಾರೆ. ಬೆಂಗಳೂರು ಪ್ರಾಂತ್ಯದ ಫಲಿತಾಂಶದಲ್ಲೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಇಲ್ಲಿ ಹುಡುಗಿಯರು ಶೇ 98.94ರಷ್ಟು ಹಾಗೂ ಹುಡುಗರು ಶೇ 97.66ರಷ್ಟು ಫಲಿತಾಂಶ ಪಡೆದಿದ್ದಾರೆ. ಬೆಂಗಳೂರು ಪ್ರಾಂತ್ಯದ ಸರ್ಕಾರಿ ಶಾಲೆಗಳು ಶೇ 100 ರಷ್ಟು ಫಲಿತಾಂಶ ದಾಖಲಿಸಿವೆ. ಸ್ವತಂತ್ರ ಸಂಸ್ಥೆಗಳು ಶೇ 98.06, ಜವಾಹರಲಾಲ್ ನೆಹರೂ ವಿದ್ಯಾಸಂಸ್ಥೆಗಳು ಶೇ 99.60ರಷ್ಟು ಹಾಗೂ ಕೇಂದ್ರೀಯ ವಿದ್ಯಾಲಯಗಳು ಶೇ 99.59ರಷ್ಟು ಫಲಿತಾಂಶ ಪಡೆದಿವೆ.