ಬೆಂಗಳೂರು: ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ, ನಿರೂಪಕ ಅಕುಲ್ ಬಾಲಾಜಿ ಮತ್ತು ನಟ ಸಂತೋಷ್ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದೆ. ಇಬ್ಬರೂ ಕೂಡ ತಮ್ಮ ರೆಸಾರ್ಟ್ ಮತ್ತು ವಿಲ್ಹಾ ಕುರಿತ ದಾಖಲೆಗಳನ್ನು ಸಿಸಿಬಿ ಅಧಿಕಾರಿಗಳಿಗೆ ನೀಡಿದ್ದಾರೆ.
ಆದರೆ ಇಬ್ಬರ ಹೇಳಿಕೆಯಲ್ಲಿ ಗೊಂದಲವಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ವಿಚಾರಣೆ ಮುಂದುವರಿದಿದೆ.
ನೋಟಿಸ್ ನೀಡಲಾಗಿರುವ ಯುವರಾಜ್ ಕೂಡ ವಿಚಾರಣೆಗೆ ಹಾಜರಾಗಿದ್ದು, ಮುಖ್ಯವಾಗಿ ಆರೋಪಿ ವೈಭವ್ ಜೈನ್ ಜತೆಗಿನ ಸಂಪರ್ಕದ ಬಗ್ಗೆ ಪ್ರಶ್ನಿಸಲಾಗಿದೆ.
ಈ ಮಧ್ಯೆ ಮಾದಕ ದ್ರವ್ಯ ಜಾಲದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಕುರಿತಂತೆ ಮಹತ್ವದ ದಾಖಲೆಗಳನ್ನು ಸಿಸಿಬಿ ಸಂಗ್ರಹಿಸಿದೆ ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಸಂಜನಾ ಮಾದಕ ದ್ರವ್ಯ ಜಾಲದಲ್ಲಿ ಗುರುತಿಸಿಕೊಂಡಿರವವರ ಜತೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು ಎಂಬುದನ್ನು ಸಿಸಿಬಿ ಪತ್ತೆ ಹಚ್ಚಿದೆ ಎಂದು ವರದಿಯಾಗಿದೆ. ಈ ಸಂಬಂಧ ಅಗತ್ಯ ದಾಖಲೆಗಳನ್ನು ಕೂಡ ಅದು ಸಂಗ್ರಹಿಸಿದೆ ಎಂದು ವರದಿಯಾಗಿದೆ.