newsics.com
ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯು ಈ ವರ್ಷದ ಬಾಲ ಸಾಹಿತ್ಯ ಪುರಸ್ಕಾರ ಹಾಗೂ ಯುವ ಪುರಸ್ಕಾರ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.
ಬಾಲ ಸಾಹಿತ್ಯ ಪುರಸ್ಕಾರಕ್ಕೆ ಕನ್ನಡದ ಪ್ರಸಿದ್ಧ ಲೇಖಕಿಯೂ ಆಗಿರುವ ಇನ್ಫೋಸಿಸ್ ಸಂಸ್ಥಾಪಕಿ ಸುಧಾ ಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಅಲ್ಲಿಯೇ ವಿಜಯಶ್ರೀ ಹಾಲಾಡಿ ಸೇರಿ 22 ಜನರನ್ನು ಆಯ್ಕೆ ಮಾಡಲಾಗಿದೆ. ಯುವ ಪುರಸ್ಕಾರಕ್ಕೆ ಮಂಜುನಾಯಕ್ ಚಳ್ಳೂರು ಸೇರಿ 20 ಲೇಖಕರು ಭಾಜನರಾಗಿದ್ದಾರೆ.
ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮಾಧವ್ ಕೌಶಿಕ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕಾರ್ಯಕಾರಿ ಸಮಿತಿಯ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬಾಲ ಸಾಹಿತ್ಯ ಪುರಸ್ಕಾರ ಮಕ್ಕಳ ಲೇಖಕಿ ಸುಧಾ ಮೂರ್ತಿ ಅವರ ‘ಗ್ರ್ಯಾಂಡ್ ಪೇರೆಂಟ್ಸ್ ಬ್ಯಾಗ್ ಆಫ್ ಸ್ಟೋರೀಸ್’ ಎಂಬ ಕಥಾ ಸಂಕಲನಕ್ಕೆ ಪ್ರಶಸ್ತಿ ನೀಡಲಾಗುತ್ತದೆ. ಮತ್ತೊಬ್ಬ ಕನ್ನಡತಿ ವಿಜಯಶ್ರೀ ಹಾಲಾಡಿ ಅವರ ‘ಸೂರಕ್ಕಿ ಗೇಟ್’ ಮಕ್ಕಳ ಕಾದಂಬರಿಗೆ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.
ಕನ್ನಡದ ಯುವ ಕತೆಗಾರ ಮಂಜುನಾಯಕ್ ಚಳ್ಳೂರು ಅವರ ‘ಫೂ ಮತ್ತು ಇತರ ಕತೆಗಳು’ ಕಥಾ ಸಂಕಲನಕ್ಕೆ ಯುವ ಪುರಸ್ಕಾರ ದೊರೆತಿದೆ. ಎರಡೂ ಪ್ರಶಸ್ತಿಗಳ ವಿಜೇತರಿಗೆ ತಾಮ್ರದ ಫಲಕ ಮತ್ತು ತಲಾ 50,000 ರೂ.ಗಳ ಬಹುಮಾನ.