* ರಾಜ್ಯದಲ್ಲಿ ಮೂರು ದಿನ ಶೋಕಾಚರಣೆ
ಬೆಂಗಳೂರು: ಪೇಜಾವರ ಶ್ರೀಗಳ ದೇಹಾಂತ್ಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೂರು ದಿನ ಶೋಕಾಚರಣೆಗೆ ಸರ್ಕಾರ ಆದೇಶಿಸಿದೆ.
ಸಂತಾಪ ನುಡಿಗಳನ್ನಾಡುವ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಮಾಹಿತಿ ನೀಡಿದರು.
ಶ್ರೀಗಳ ದೇಹಾಂತ್ಯದಿಂದ ಹಿಂದೂ ಧರ್ಮದ ಪ್ರಮುಖ ಮಾರ್ಗದರ್ಶಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಷಾದಿಸಿದ್ದಾರೆ.
ಶ್ರೀಗಳು ಎಳವೆಯಲ್ಲಿಯೇ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ, ಪೇಜಾವರ ಮಠಾಧೀಶರಾದವರು. ಅಷ್ಟಮಠಗಳ ಪರಂಪರೆಯಲ್ಲಿ ಅತಿ ಹೆಚ್ಚು ಬಾರಿ ಉಡುಪಿ ಪರ್ಯಾಯದ ನೇತೃತ್ವ ವಹಿಸಿದ ಹೆಗ್ಗಳಿಕೆ ಶ್ರೀಗಳದ್ದು. ಆಧ್ಯಾತ್ಮಿಕ ಸಾಧನೆಯೊಂದಿಗೆ ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡಿದ್ದರು ಎಂದು ಬಿಎಸ್ ವೈ ಎಂದು ಹೇಳಿದರು.
ದಲಿತರೊಂದಿಗೆ ಸಹಭೋಜನದಂತಹ ಕ್ರಮಗಳಿಂದ ಹಿಂದೂ ಧರ್ಮದಲ್ಲಿ ಅಸಮಾನತೆಯ ಕೂಗು ಕ್ಷೀಣಿಸುವಂತೆ ಮಾಡಲು ಪ್ರಯತ್ನಿಸಿದವರು ಎಂದು ಯಡಿಯೂರಪ್ಪ ಸ್ಮರಿಸಿದರು.
ಶ್ರೀಕೃಷ್ಣನು ಅವರ ಆತ್ಮಕ್ಕೆ ಮೋಕ್ಷ ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಕ್ತಾದಿಗಳಿಗೆ ನೀಡಲಿ ಎಂದು ಪ್ರಾರ್ಥಿಸುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ..