ಬೆಂಗಳೂರು: ಲಾಕ್ ಡೌನ್ ಬಗ್ಗೆ ಯಾವುದೇ ಸಚಿವರು ಗೊಂದಲದ ಹೇಳಿಕೆ ನೀಡದಂತೆ ಸಚಿವರಿಗೆ ಸಿಎಂ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಹಾಗೂ ಬೆಂಗಳೂರಿನಲ್ಲಿ ಕೊರೋನಾ ಮಹಾಸ್ಪೋಟವೇ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಡಲಾಗುತ್ತದೆ ಎಂಬ ವದಂತಿ ಹಬ್ಬಿತ್ತು. ಇಂತಹ ವದಂತಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಲಾಕ್ ಡೌನ್ ಮತ್ತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಲಾಕ್ ಡೌನ್ ಬಗ್ಗೆ ಗೊಂದಲ ಮೂಡಿಸಬೇಡಿ. ಸಚಿವರು ಭಿನ್ನ ಹೇಳಿಕೆಗಳನ್ನ ನೀಡಬೇಡಿ ಎಂಬುದಾಗಿ ಸಚಿವರಿಗೆ ಸಿಎಂ ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ಹೇಳಲಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಯಡಿಯೂರಪ್ಪ, ಲಾಕ್ ಡೌನ್ ಬಗ್ಗೆ ತುಟಿ ಬಿಚ್ಚಬೇಡಿ ಎಂಬುದಾಗಿ ಸಚಿವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಇಂದು ಮತ್ತು ನಾಳೆ ಕೋವಿಡ್ 19 ವಿಚಾರವಾಗಿ ಸರಣಿ ಸಭೆ ನಡೆಸಲಿದ್ದೇವೆ. ನಾಳೆ ಸರ್ವಪಕ್ಷಗಳ ಬೆಂಗಳೂರು ಶಾಸಕರ ಅಭಿಪ್ರಾಯ ಪಡೆಯೋಣ. ಕೋವಿಡ್ 19 ವಿಚಾರವಾಗಿ ತಜ್ಞರಿಂದ ಅಂತಿಮ ವರದಿ ಕೂಡ ಬರಬೇಕಿದೆ. ಹೀಗಾಗಿ ಈಗಲೇ ಲಾಕ್ ಡೌನ್ ಮಾಡುವ ನಿರ್ಧಾರ ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆಂದು ತಿಳಿದುಬಂದಿದೆ.