ಬೆಂಗಳೂರು: ಕೊರೋನಾ ನಿಯಂತ್ರಿಸಲು ಸರ್ಕಾರ ಹಾಗೂ ಜನರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಇದೇ ಪ್ರಯತ್ನವಾಗಿ ಇನ್ಮುಂದೆ ಕೊರೋನಾ ನಿರೋಧಕ ಶಕ್ತಿ ತುಂಬಬಲ್ಲ ಕಷಾಯದ ಪುಡಿ ನಿಮ್ಮ ಮನೆಗೆ ಬರಲಿದೆ.
ಅಂಚೆ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯದ ಪುಡಿ ಪೂರೈಸುವ ವಿನೂತನ ಯೋಜನೆಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್ಎಂಡಿಎಂಸಿ) ನಿರ್ಧರಿಸಿದೆ. ಈ ಹಿಂದೆ ಮಾವನ್ನು ಅಂಚೆ ಮೂಲಕ ಗ್ರಾಹಕರಿಗೆ ತಲುಪಿಸಿದ ಖ್ಯಾತಿ ಹೊಂದಿರುವ ಈ KSMDMC ಈಗ ಸಾಂಬಾರು ಬೆಳೆಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಇಂತಹದೊಂದು ಪ್ರಯತ್ನಕ್ಕೆ ಮುಂದಾಗಿದೆ.
ಕೊರೋನಾ ನಿವಾರಿಸುವ ಮನೆಯಂಗಳದ ಕಷಾಯಗಳು
ಕರ್ನಾಟಕ ಸರ್ಕಾರವೂ ಜನರಲ್ಲಿ ಈ ರೋಗದ ಪ್ರತಿರೋಧಕ ಶಕ್ತಿ ಹೆಚ್ಚಿಸುವಂತೆ ಮಾಡಲು ಕಷಾಯ ಕುಡಿಸಲು ಮುಂದಾಗಿದೆ.
ಹೀಗಾಗಿ ಸರ್ಕಾರದ ಉದ್ದೇಶ ಈಡೇರಿಕೆಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಪೋಸ್ಟ್ ಮೂಲಕ ಕಷಾಯದ ಪುಡಿ ಪೂರೈಕೆಗೆ ಸಿದ್ಧತೆ ನಡೆಸಿದೆ.
ಕಷಾಯದ ತಯಾರಿಕೆಗೆ ಅಗತ್ಯವಾದ ವಸ್ತುಗಳುಳ್ಳ 3 ಕೆಜಿಯ ಪ್ಯಾಕ್ ಗೆ 600 ರೂಪಾಯಿ ಶುಲ್ಕ ವಿಧಿಸಲಾಗಿದ್ದು, ಈ ಕಿಟ್ ನಲ್ಲಿ ಕೊಟ್ಟ ಆರ್ಯುವೇದ ಔಷಧಗಳನ್ನು ಬಳಸಿಕೊಂಡು ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಬಹುದಾಗಿದೆ.
ಆಸಕ್ತರು KSMDMC ನ ಅಧಿಕೃತ ವೆಬ್ ಸೈಟ್ ಗೆ ಲಾಗಿನ್ ಮಾಡಿ ಕಷಾಯದ ಕಿಟ್ ಬುಕ್ ಮಾಡಬಹುದಾಗಿದೆ.
ಗಿಡಮೂಲಿಕೆ, ಸಾಂಬಾರು ಹಾಗೂ ಔಷಧೀಯ ಸಸ್ಯಗಳನ್ನು ಒಳಗೊಂಡ ಈ ಕಿಟ್ ನ ಕಷಾಯ ಜ್ವರ, ತಲೆನೋವು ಹಾಗೂ ವಿಷಮಶೀತ ಜ್ವರದಂತ ಹಲವು ಬಾಧೆಗಳನ್ನು ದೂರ ಮಾಡಲಿದೆ KSMDMC ಹೇಳಿದೆ.