-
ವಿನೋದ್response@134.209.153.225
ಮಂಗಳೂರಿನಲ್ಲಿ ಗಲಭೆ ಎಂದರೆ ಹಾಗೆಯೇ… ಅನಿರೀಕ್ಷಿತಗಳನ್ನು, ಫಕ್ಕನೆ ಮಾಸದ ಗಾಯ, ಕಂದಕಗಳನ್ನು ಸೃಷ್ಟಿಸಿ ಹೋಗುತ್ತದೆ. ಪಾಠಗಳನ್ನು ಕಲಿಸುತ್ತದೆ. ಈ ಬಾರಿಯ ಗಲಭೆ ಮೊಬೈಲ್ ಇಂಟರ್ನೆಟ್ ದುರುಪಯೋಗದ ಬಗ್ಗೆ ಪಾಠ ಕಲಿಸಿತು. ಮೊಬೈಲ್, ಇಂಟರ್ನೆಟ್ ಇಲ್ಲದ ಆ ಎರಡು ದಿನದ ಅನುಭವ ಹೇಗಿತ್ತು ಎಂಬುದನ್ನು ಬರಹಗಾರ ಮಂಗಳೂರಿನ ವಿನೋದ್ ಅಕ್ಷರರೂಪಕ್ಕಿಳಿಸಿದ್ದಾರೆ.
===
ದಿಢೀರ್ ಆಗಿ ಎದ್ದ ಗಲಭೆ, ಪೌರತ್ವ ತಿದ್ದುಪಡಿ ಕಾಯಿದೆಗೆ ವಿರೋಧ ಹೆಸರಲ್ಲಿ ಆದ ಪ್ರತಿಭಟನೆ, ಅದಕ್ಕೆ ಪೊಲೀಸರ ತಡೆಯಿಂದ ಸ್ಫೋಟಗೊಂಡು ಇಬ್ಬರ ಸಾವಿನಲ್ಲಿ ಪರ್ಯಾವಸಾನ.
ನಂತರ ಯಾವುದೇ ಅಹಿತಕರ ಘಟನೆ ಆಗದಿರಲಿ, ಅದಕ್ಕೆ ಸೋಶಿಯಲ್ ಮೀಡಿಯಾ ಪೆಟ್ರೋಲ್ ಸುರಿಯದಿರಲಿ ಎಂದು ಸರ್ಕಾರ ಕರ್ಫ್ಯು ಘೋಷಿಸುವ ಜತೆಗೇ ಎರಡು ದಿನದ ಮೊಬೈಲ್, ಇಂಟರ್ನೆಟ್ ಬಂದ್ ಆದೇಶ ಪ್ರಕಟಿಸಿತು.
ಇಂಟರ್ನೆಟ್ ತುಂಡರಿಸಿದ ವಿದ್ಯಮಾನ ರಾಜ್ಯದಲ್ಲಿ ಇದು ಮೊದಲಿರಬೇಕು. ಡಿ.19ರ ರಾತ್ರಿ 12ಕ್ಕೆ ಸರ್ಕಾರದ ಸೂಚನೆ ಮೇರೆಗೆ ನಿಮ್ಮ ಮೊಬೈಲ್ ಇಂಟರ್ನೆಟ್ ರದ್ದಾಗಿದೆ ಎಂಬ ಮೆಸೇಜಿನೊಂದಿಗೆ ಮೊಬೈಲ್ ವಾಟ್ಸ್ಯಾಪ್ ಫೇಸ್ಬುಕ್ ಇನ್ಸಟಗ್ರಾಂ ಸ್ತಬ್ದಗೊಂಡವು.
ಕಾಶ್ಮೀರದಲ್ಲೆಲ್ಲೊ ಕೆಲ ತಿಂಗಳ ಮೊದಲು ಹಾಗೆ ಆಗಿತ್ತು ಎಂದು ಓದಿದ್ದು ನೋಡಿದ್ದು ಈಗ ನಮ್ಮ ಅನುಭವಕ್ಕೇ ಬಂತು.
ಯಾವ ತಂತ್ರಜ್ಞಾನ ಬಂದರೂ ಅದನ್ನು ದುರುಪಯೋಗ ಮಾಡುವುದು ಮನುಷ್ಯನ ಬಹುದೊಡ್ಡ ಲೋಪ. ಅದುವೇ ಇಂಟರ್ನೆಟ್ ಹೆಸರಲ್ಲೂ ಆಗುತ್ತಿದೆ, ಜಿಯೊ ಮೊಬೈಲ್ ಇಂಟರ್ನೆಟ್ ಬಂದ ಬಳಿಕವಂತೂ ಅತಿರೇಕಕ್ಕೆ ಹೋಗಿತ್ತು. ಬದುಕೇ ಸ್ಮಾರ್ಟ್ ಝೋನ್ ಮೇಲೆ ನಿಂತಿದೆ ಎಂಬಂತಾಯ್ತು. ಅಲ್ಲೂ ಮೊಬೈಲ್ ಡೇಟಾ ಬಳಕೆ ಮಾಡಿಕೊಂಡು ಹೊಸ ಸ್ಟಾರ್ಟಪ್ಗಳು ಓಲಾ ಉಬರ್ ನಂತಹ ಕಂಪನಿ, ಝೊಮಾಟೊದಂತಹ ಫುಡ್ ಡೆಲಿವರಿ ಶುರುವಾಗಿ ಅನೇಕರ ಉದ್ಯೋಗಕ್ಕೆ ನೆರವಾಗಿದ್ದು ನಿಜ. ಆದರೆ ವಾಟ್ಸ್ಯಾಪ್ ಹಾಗೂ ಫೇಸ್ಬುಕ್ ಮೂಲಕ ನಾವೆಲ್ಲ ಅನಗತ್ಯವಾಗಿ ಈ ವೇದಿಕೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆಯೇ ಎಂದು ಅನಿಸಿದ್ದು ನಿಜ.
ಅತಿರೇಕ ಎನ್ನುವ ಅಭಿಪ್ರಾಯ ಹೇರಿಕೆ, ಯಾರ್ ಯಾರನ್ನೋ ಅಪಹಾಸ್ಯ ಮಾಡುವುದು, ಟ್ರೋಲ್ ಹೆಸರಲ್ಲಿ ಕೆಟ್ಟ ಹಾಸ್ಯ ಇವೆಲ್ಲ ಮಿತಿಮೀರುವ ಹಂತ ತಲಪಿತ್ತು. ಒಳಿತಿಗಿಂತಲೂ ಕೆಡುಕೇ ಹೆಚ್ಚಿದೆಯೇ ಎನಿಸಿತು. ಇದು ಸಾಮಾಜಿಕವಾಗಿ. ಇನ್ನು ವೈಯಕ್ತಿಕವಾಗಿ ನೋಡಿದರೆ ಪದೇ ಪದೇ ಫೋನ್ನ ಸ್ಕ್ರೀನ್ ನೋಡುವುದೇ ಗೀಳಾಯ್ತು. ಫೇಸ್ಬುಕ್ನಲ್ಲಿ ಹೊಸತೇನು ಬಂತು? ಫ್ಲಿಪ್ಕಾರ್ಟಲ್ಲಿ ಹೊಸ ಆಫರ್ ಏನಿದೆ? ವಾಟ್ಸಾಪ್ ಗ್ರೂಪಲ್ಲಿ ಏನು ಚರ್ಚೆ ಆಗ್ತಿದೆ ಎನ್ನುವ ಕೆಟ್ಟ ಕುತೂಹಲ ನಮ್ಮ ಕಣ್ಣುಗಳನ್ನು ಸ್ಮಾರ್ಟಫೋನ್ ಸೆಳೆಯುತ್ತಲೇ ಇತ್ತು. ಮನೆಯಲ್ಲಿ ಊಟ ಮಾಡುವಾಗ ಮಗನ ತುಂಟ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಸ್ಮಾರ್ಟಫೋನ್ ಉಜ್ಜುವ ಗತಿ.
ಇದೆಲ್ಲದರ ನಡುವೆ ಈಗ ದಿಢೀರ್ ಇಂಟರ್ನೆಟ್ ಆಫ್ ಎಂದಾದರೆ…..? ಏನಾಗಬಹುದು ನಮ್ಮ ಗತಿ?
ನಿನ್ನೆ ನಮ್ಮ ಕೆಲ ಮಾಧ್ಯಮ ಮಿತ್ರರು ಸುದ್ದಿಗೋಷ್ಠಿಯಲ್ಲಿ ಸಿಕ್ಕರು. ಅಲ್ಲಿನ ಚಿತ್ರಣವೇ ಬದಲಾಗಿತ್ತು. ಎಲ್ಲರೂ ಅಪರೂಪಕ್ಕೆ ಕುಳಿತು ಪರಸ್ಪರ ಹರಟೆಯಲ್ಲಿ ತೊಡಗಿದ್ದರು. ಮುಖದಲ್ಲಿ ನಗುವಿತ್ತು, ಭಾವನೆಗಳಿದ್ದವು. ಮೊನ್ನೆ ಮೊನ್ನೆ ಸುದ್ದಿಗೋಷ್ಠಿಗಳು ಯಾಂತ್ರಿಕವಿರುತ್ತಿದ್ದವು. ಮಿತ್ರರು ಎರಡೆರಡು ಸ್ಮಾರ್ಟ್ ಫೋನ್ ಉಜ್ಜುತ್ತಾ, ಟೆಕ್ಸಟಿಂಗ್ ಮಾಡುತ್ತಾ, ಅಪ್ಡೇಟ್ ಮಾಡುತ್ತಾ ಕುಳಿತಿರುತ್ತಿದ್ದರು, ಪಕ್ಕದಲ್ಲಿರುವವರ ಜತೆ ಮಾತನಾಡುವುದಿರಲಿ ನೋಡುವುದೇ ಕಷ್ಟ ಎನ್ನುವ ಸ್ಥಿತಿ. ಈಗ ನೆಟ್ ಇಲ್ಲದೆ ಮೊಬೈಲ್ ಕಿಸೆಯಲ್ಲೇ ಬಾಕಿ.. ಮತ್ತೆ ಆತ್ಮೀಯ ವಾತಾವರಣ ತಂದು ಕೊಟ್ಟಿತ್ತು, ಮಿತ್ರರಲ್ಲಿ ಮಾತನಾಡುವಾಗ ಅವರೆಲ್ಲರಿಗೂ ಇದೊಂದು ನಿರಾಳತೆ ತಂದುಕೊಟ್ಟಿದ್ದು ನಿಜ ಎಂದೇ ಹೇಳಿಕೊಂಡರು.
ನಿಜ..ನಮ್ಮ ಬದುಕು ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಮೊಬೈಲ್ ಇಂಟರ್ನೆಟ್ನಲ್ಲಿ ನಾವು ಸಾಕಷ್ಟು ಮುಂದೆ ಬಂದಾಗಿದೆ, ವೃತ್ತಿಯಲ್ಲೂ ಹಾಸುಹೊಕ್ಕಾಗಿದೆ, ಆದರೆ ಅದರಲ್ಲೂ ನಮ್ಮ ಮಿತಿಗಳನ್ನು ಅರಿತುಕೊಂಡು ಬದುಕಿನಲ್ಲಿ ಸಮತೋಲನ ಮಾಡಿಕೊಂಡರೆ ಒಳ್ಳೆಯದು. ಇಲ್ಲವಾದರೆ ನಾವು ಸ್ಮಾರ್ಟ್ ಫೋನ್ ಗುಲಾಮರಾಗಿಯಷ್ಟೇ ಉಳಿಯುತ್ತೇವೆ.