ಬೆಂಗಳೂರು: ಮಾದಕ ದ್ರವ್ಯ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಇದೀಗ ರಾಗಿಣಿ ಮತ್ತು ಸಂಜನಾ ಅವರನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದೆ. ಮಡಿವಾಳದಲ್ಲಿರುವ ಎಫ್ ಎಸ್ ಎಲ್ ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ. ಇಬ್ಬರೂ ನಟಿಯರು ತನಿಖಾಧಿಕಾರಿಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ಈ ಮಧ್ಯೆ ಆರೋಪಿಗಳು ಡಿಲೀಟ್ ಮಾಡಿದ ಸಾಕ್ಷ್ಯಗಳನ್ನು ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ. ತಂತ್ರಜ್ಞಾನದ ಸಹಾಯಪಡೆದು ಎಲ್ಲ ದಾಖಲೆ ಸಂಗ್ರಹಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದರಿಂದ ಮತ್ತೊಂದು ಪ್ರಕರಣ ಇಬ್ಬರೂ ನಟಿಯರ ವಿರುದ್ಧ ದಾಖಲಾಗುವ ಸಾಧ್ಯತೆಯಿದೆ.
ಇದೇ ವೇಳೆ ರಾಗಿಣಿ ಕೇವಲ ಎರಡು ಬಾರಿ ಮಾತ್ರ ಪಾರ್ಟಿಗೆ ಬಂದಿದ್ದಳು . ಆದರೆ ಸಂಜನಾ ಹಲವು ಬಾರಿ ತಾನು ಆಯೋಜಿಸಿದ್ದ ಪಾರ್ಟಿಗಳಲ್ಲಿ ಭಾಗವಹಿಸಿದ್ದಳು ಎಂಬ ಮಾಹಿತಿಯನ್ನು ವಿರೇನ್ ಖನ್ನಾ ಬಹಿರಂಗಪಡಿಸಿದ್ದಾನೆ ಎಂದು ವರದಿಯಾಗಿದೆ. ಈ ಎಲ್ಲ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಿಸಿಬಿ ಬಲಪಡಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.