newsics.com
ಅಂಕೋಲಾ(ಉತ್ತರ ಕನ್ನಡ): ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ಘೋಷಿಸಿದೆ.
ಅಂಕೋಲಾ ತಾಲೂಕಿನ ಹೊನ್ನಳ್ಳಿಯ ಹಾಲಕ್ಕಿ ಸಮುದಾಯದ ಪದ್ಮಶ್ರೀ ತುಳಸಿ ಗೌಡ ಅವರು ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಈ ಪದವಿ ಘೋಷಿಸಲಾಗಿದೆ.
ಜೂನ್ 16ರಂದು ನಡೆಯುವ ಕೃಷಿ ವಿಶ್ವವಿದ್ಯಾಲಯದ 36 ನೇ ಘಟಿಕೋತ್ಸವದಲ್ಲಿ ‘ವೃಕ್ಷಮಾತೆ’ ಖ್ಯಾತಿಯ ತುಳಸಿ ಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ವಿವಿ ಪ್ರಕಟಣೆ ತಿಳಿಸಿದೆ.
ಹಾಲಕ್ಕಿ ಸಮುದಾಯದ ತುಳಸಿ ಗೌಡ ಅಂಕೋಲಾ ತಾಲೂಕಿನ ಅಗಸೂರಿನ ಹೊನ್ನಳ್ಳಿ ಗ್ರಾಮದ ನಿವಾಸಿ. ನಾರಾಯಣ ಹಾಗೂ ನೀಲಿ ದಂಪತಿಗೆ 1944ರಲ್ಲಿ ಜನಿಸಿದ ತುಳಸಿ ಗೌಡ ಬಡತನದ ಜತೆಗೆ ತನ್ನ ಎರಡನೇ ವಯಸ್ಸಿನಲ್ಲಿಯೇ ತಂದೆಯನ್ನೂ ಕಳೆದುಕೊಂಡರು. ಶಾಲೆ ಮೆಟ್ಟಿಲನ್ನು ಏರದೇ ತಾಯಿಯ ಜತೆ ಚಿಕ್ಕಂದಿನಿಂದಲೇ ಕೂಲಿ ಕೆಲಸ ಆರಂಭಿಸಿದರು. ವರ್ಷಕ್ಕೆ ಸುಮಾರು 30 ಸಾವಿರ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದ್ದಾರೆ.