ಬೆಂಗಳೂರು: ಯಕ್ಷಗಾನದ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ ಟಿ ರವಿ ಘೋಷಿಸಿದ್ದಾರೆ.
‘ಯಕ್ಷಗಾನದ ಪ್ರಸಂಗಗಳನ್ನು ಡಿಜಿಟಲೀಕರಣ ಮಾಡುವುದಾಗಿ ಇಲಾಖೆ ವತಿಯಿಂದ ಯೋಜನೆ ಹಮ್ಮಿಕೊಳ್ಳಲಾಗಿದೆ’ ಎಂದು ತಮ್ಮ ಟ್ವೀಟ್ ನಲ್ಲಿ ಮಾಹಿತಿ ನೀಡಿದ್ದಾರೆ. ಈ ಹೊಸ ಯೋಜನೆಗೆ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ‘ನಮ್ಮ ಹೆಮ್ಮೆಯ ಕಲೆ ಯಕ್ಷಗಾನ ಇನ್ನು ಮುಂದೆ ಡಿಜಿಟಲ್ ಮಾಧ್ಯಮದ ಮೂಲಕ ಮೊಬೈಲ್ ಹಾಗೂ ಕಂಪ್ಯೂಟರ್ ಗಳಿಗೆ ಬರಲಿದ್ದು, ಇದು ಒಂದು ಸಾಧನೆ ಎಂದು ಭಾವಿಸಿದ್ದೇನೆ. ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕು ಎಂಬ ಮಾತನ್ನು ನಾನು ಒಪ್ಪುತ್ತೇನೆ’ ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ಮನ ಗೆದ್ದ ತುಳಸಿಯ ‘ಪಂಚ ಪಾವನ ಕಥಾ’:
ಈ ಯೋಜನೆಯಿಂದ ಯಕ್ಷಗಾನವನ್ನು ಇನ್ನು ಮುಂದೆ ಮೊಬೈಲ್, ಕಂಪ್ಯೂಟರಿನಲ್ಲಿ ನೋಡಬಹುದಾಗಿದೆ. ಡಿಜಿಟಲೀಕರಣ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ.ಎಂ.ಎ.ಹೆಗಡೆ ಅವರ ನಿರ್ದೇಶನದ ಪಂಚಭೂತಗಳನ್ನು ಪಾವನಗೊಳಿಸಿ ಪ್ರಕೃತಿ ಸಂರಕ್ಷಿಸಿದ ಮಾಧವನ ಬಾಲಲೀಲಾ ಲೋಕದ `ಪಂಚ ಪಾವನ ಕಥಾ’ವನ್ನು ಪುಟಾಣಿ ಶಿರಸಿಯ ತುಳಸಿ ಹೆಗಡೆ ಪ್ರಸ್ತುತಪಡಿಸಿ ನೋಡುಗರ ಮನ ಗೆದ್ದಳು.