ಬೆಂಗಳೂರು: ಉತ್ತೀರ್ಣರಾದವರಿಗೆ ಮಾತ್ರ ಎಸ್ಎಂಎಸ್ ಕಳಿಸುವ ವ್ಯವಸ್ಥೆಯನ್ನು ಪಿಯು ಮಂಡಳಿ ಜಾರಿಗೆ ತಂದಿದೆ. ಆದರೆ ತಾಂತ್ರಿಕ ಸಮಸ್ಯೆಯಿಂದ ಪಾಸ್ ಆದವರಿಗೂ ಎಸ್ಎಂಎಸ್ ಬಾರದ ಕಾರಣ ಹಲವು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದರು. ಶಿಕ್ಷಣ ಸಚಿವ ಸುರೇಶ ಕುಮಾರ್ ಈ ಆತಂಕವನ್ನು ಹೋಗಲಾಡಿಸುವ ಯತ್ನ ಮಾಡಿದ್ದಾರೆ.
ಮೆಸೇಜ್ ಬಂದಿಲ್ಲ ಎಂದರೆ ಫೇಲ್ ಎಂದರ್ಥವಲ್ಲ ಎಂದು ಸುರೇಶ ಕುಮಾರ್ ಹೇಳಿದ್ದಾರೆ. ಪಾಸ್ ಆದವರಿಗೆ ಮಾತ್ರ ನಾವು SMS ಕಳುಹಿಸುತ್ತಿದ್ದೇವೆ ಎಂಬುದು ನಿಜ. ಆದರೆ, ನೆಟ್ವರ್ಕ್ ಸಮಸ್ಯೆ ಇಂದಲೂ ಮೆಸೇಜ್ ಒಮ್ಮೊಮ್ಮೆ ಬರದೇ ಇರಬಹುದು. ಹೀಗಾಗಿ ವಿದ್ಯಾರ್ಥಿಗಳು ಆತಂಕಕ್ಕೊಳಗಾಗುವುದು ಬೇಡ ಎಂದು ಹೇಳಿದ್ದಾರೆ.
ಫೇಲ್ ಆದವರಿಗೆ ಮೆಸೇಜ್ ಕಳುಹಿಸುತ್ತಿಲ್ಲವೇಕೆ ಎನ್ನುವ ಬಗ್ಗೆಯೂ ಅವರು ಸ್ಪಷ್ಟನೆ ನೀಡಿದ್ದಾರೆ. ಅನುತ್ತೀರ್ಣ ಆದವರು ಮಾರ್ಕ್ಸ್ ನೋಡಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗದಿರಲಿ ಎನ್ನುವ ಉದ್ದೇಶದಿಂದ ಮೆಸೇಜ್ ಕಳಿಸುತ್ತಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಶೇ.69.20 ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ ಶೇ. 76.02 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ,65.52 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 41.27 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸುರೇಶ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಈ ಎರಡು ಜಿಲ್ಲೆಗಳಲ್ಲಿ ಶೇ. 90.75 ರಷ್ಟು ಫಲಿತಾಂಶ ಬಂದಿದೆ. ವಿಜಯಪುರ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿದೆ.
92 ಕಾಲೇಜುಗಳು ಶೇ 100 ಫಲಿತಾಂಶ ಸಾಧಿಸಿವೆ. 88 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ. ಶ್ಯೂನ ಫಲಿತಾಂಶ ಬಂದ ಕಾಲೇಜ್ ಗಳ ಮೇಲೆ ಕ್ರಮ ಶಿಕ್ಷಣ ಇಲಾಖೆ ಹೇಳಿದೆ. 3 ಸರ್ಕಾರಿ ಪದವಿಪೂರ್ವ ಕಾಲೇಜು, 1 ಅನುದಾನಿತ ಪದವಿ ಪೂರ್ವ ಕಾಲೇಜು, 88 ಅನುದಾನರಹಿತ ಪದವಿಪೂರ್ವ ಕಾಲೇಜುಗಳು ಶೇ 100 ಫಲಿತಾಂಶ ಪಡೆದಿವೆ.
ರಾಜ್ಯದಲ್ಲಿ ಒಟ್ಟು 6,75,277 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ಹೊಸಬರು 5,56267 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದರಲ್ಲಿ 3,84,947 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನಾರಾವರ್ತಿತ 91,025 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 25,602 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.