ಉಡುಪಿ: ಜನಪ್ರಿಯ ವೈದ್ಯ, ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ನಿವೃತ್ತ ಡೀನ್ ಎ. ಕೃಷ್ಣ ರಾವ್ (96) ಭಾನುವಾರ (ಜು.26) ಮಣಿಪಾಲದ ಸ್ವಗೃಹದಲ್ಲಿ ನಿಧನರಾದರು.
ಮಣಿಪಾಲದ ಸೋನಿಯಾ ಕ್ಲಿನಿಕ್ ಆವರಣದಲ್ಲಿರುವ ಮನೆಯಲ್ಲಿ ವಾಸವಿದ್ದ ಅವರಿಗೆ ಪುತ್ರಿಯರಾದ ಸೋನಿಯಾ ಕ್ಲಿನಿಕ್ನ ಡಾ.ಗಿರಿಜಾ, ಡಾ.ಗೌರಿ, ಡಾ.ಶುಭಗೀತಾ ಇದ್ದಾರೆ. 1954ರಲ್ಲಿ ಮಣಿಪಾಲದ ನಿರ್ಮಾತೃ ಡಾ.ಟಿಎಂಎ ಪೈಯವರು ದೇಶದ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಆರಂಭಿಸಿದಾಗ ಮಣಿಪಾಲಕ್ಕೆ ಬಂದ ಡಾ.ಕೃಷ್ಣ ರಾವ್ ಮತ್ತು ಪತ್ನಿ ಡಾ. ಪದ್ಮಾ ರಾವ್ ಅನಂತರ ಜೀವಿತದ ಕೊನೆಯವರೆಗೂ ಮಣಿಪಾಲದಲ್ಲೇ ನೆಲೆಸಿದ್ದರು. ಆಂಧ್ರಪ್ರದೇಶದವರಾದ ಡಾ.ರಾವ್, ಫಿಸಿಯಾಲಜಿ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿದ್ದರು. ಅವರು ಜ್ಞಾನದೊಂದಿಗೆ ಸರಳತೆ, ವಿನಯಶೀಲತೆ, ಬದ್ಧತೆ ಮೂಲಕ ಜನಮನ್ನಣೆ ಪಡೆದಿದ್ದರು.
‘ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ, ಸ್ಥಿತಿ ಗಂಭೀರ
22 ವರ್ಷ ಕೆಎಂಸಿಯ ಡೀನ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ನಿವೃತ್ತಿ ಬಳಿಕವೂ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಹಲವು ವೈದ್ಯಕೀಯ ನಿಯತಕಾಲಿಕಗಳಲ್ಲಿ ಅವರ ಪ್ರಬಂಧ ಪ್ರಕಟವಾಗಿತ್ತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ನ ಅಧ್ಯಕ್ಷರಾಗಿಯೂ ಅವರು ಅನೇಕ ವರ್ಷ ಮಾರ್ಗದರ್ಶನ ಮಾಡಿದ್ದರು. ಸಾರ್ವಜನಿಕರಿಗೆ ಸೋಮವಾರ (ಜುಲೈ 27) ಬೆಳಗ್ಗೆ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ.