ಪೊನ್ನಂಪೇಟೆ (ಕೊಡಗು): ಕಾಫಿ ತೋಟದ ಹಳ್ಳದಲ್ಲಿ ಸಿಲುಕಿ ಪರದಾಡಿದ್ದ ಒಂದು ದಿನದ ಮರಿಯಾನೆಯನ್ನು ತಾಯಿ ಮಡಿಲಿಗೆ ಸೇರಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಕುಟ್ಟ ಸಮೀಪದ ತೈಲ ಗ್ರಾಮದ ತೀತೀರ ವಾಸು ಎಂಬುವರ ತೋಟದಲ್ಲಿ ಕಾಡಾನೆಯೊಂದು ಮರಿಗೆ ಜನ್ಮ ನೀಡಿ ಹಳ್ಳದಿಂದ ತನ್ನೊಂದಿಗೆ ಕರೆದೊಯ್ಯಲು ಸಾಧ್ಯವಾಗದೆ ತೋಟದಲ್ಲಿಯೇ ಬಿಟ್ಟು ಹಿಂಡಿನೊಂದಿಗೆ ಕಾಡಿನಲ್ಲಿ ಸೇರಿಕೊಂಡಿತ್ತು. ಮರಿ ಜನಿಸಿ ಕೇವಲ ಒಂದು ದಿನವಾಗಿತ್ತು.ವಿಷಯ ತಿಳಿದ ಶ್ರೀಮಂಗಲ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಮರಿಯಾನೆಯನ್ನು ಹಳ್ಳದಿಂದ ರಕ್ಷಿಸಿ, ಕಾಡಿನಲ್ಲಿ ಸೇರಿಕೊಂಡಿದ್ದ ತಾಯಿ ಆನೆಯನ್ನು ಗುರುತಿಸಿ ಮರಿಯನ್ನು ಒಂದುಗೂಡಿಸಿರುವ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.
ಕಾಡಿನ ಅಂಚಿನಲ್ಲಿದ್ದ ತೋಟದಿಂದ ಸುಮಾರು 3 ಕಿ.ಮೀ ದೂರವಿದ್ದ ಬ್ರಹ್ಮಗಿರಿ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ತಾಯಿಯನ್ನು ಗುರುತಿಸಿದರು. ಇದೇ ಜನ್ಮ ನೀಡಿರುವ ಆನೆ ಎಂಬುದನ್ನು ಖಾತ್ರಿಪಡಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಮರಿಯನ್ನು ತಾಯಿಯೊಂದಿಗೆ ಸೇರಿಸಿದ್ದಾರೆ. ಮರಿ ಆರೋಗ್ಯವಾಗಿದೆ ಎಂದು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ವೀರೇಂದ್ರ ತಿಳಿಸಿದ್ದಾರೆ. ಇದಕ್ಕೂ ಮುನ್ನ ಮರಿಯಾನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ಕಾರ್ಯಾಚರಣೆ ನಡೆಸಿದರು.
ತಾಯಿ ಮಡಿಲು ಸೇರಿದ ಮರಿಯಾನೆ!
Follow Us