ಬೆಂಗಳೂರು: ಕಂಬಳ ವೇಳೆ ಉಸೇನ್ ಬೋಲ್ಟ್ ಗಿಂತ ವೇಗವಾಗಿ ಓಡಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮೂಲಕ ಸುದ್ದಿಯಾಗಿರುವ ಕಂಬಳ ವೀರ ಶ್ರೀನಿವಾಸ ಗೌಡರನ್ನು ಸೋಮವಾರ ರಾಜ್ಯ ಸರ್ಕಾರದ ಪರವಾಗಿ ಸನ್ಮಾನಿಸಲಾಯಿತು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀನಿವಾಸಗೌಡ ಅವರನ್ನು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಯಡಿಯೂರಪ್ಪ ಅವರು, ಶ್ರೀನಿವಾಸಗೌಡ ಅವರು ಕಂಬಳ ಓಟದಲ್ಲಿ ದೇಶದ ಗಮನವನ್ನು ಸೆಳೆದಿದ್ದಾರೆ ಎಂದು ಶ್ಲಾಘಿಸಿದರು. ಜಂಟಿ ಅಧಿವೇಶನ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ತೆರಳುವ ಮುನ್ನ ಚೆಕ್ ನೀಡುವಂತೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹಾಗೂ ಸಿ ಟಿ ರವಿ ಅವರಿಗೆ ಬಿಎಸ್ ವೈ ತಿಳಿಸಿ ತೆರಳಿದರೆನ್ನಲಾಗಿದೆ. ಆದರೆ ಈ ಇಬ್ಬರೂ ಸಚಿವರೂ ಆತುರದಲ್ಲೆ ಶ್ರೀನಿವಾಸ ಗೌಡರಿಗೆ ಖಾಲಿ ಕವರ್ ನೀಡಿ ಹೊರಟರು. ಇದಾದ ಅರ್ಧ ಗಂಟೆ ಬಳಿಕ ಕಾರ್ಮಿಕ ಇಲಾಖೆ ಅಧಿಕಾರಿಗಳು 3 ಲಕ್ಷ ರೂ. ಮೌಲ್ಯದ ಚೆಕ್ ನೀಡಿದರು.
ಕಂಬಳ ಕ್ರೀಡೆ ಗುರುತಿಸಿ ನನ್ನನ್ನು ಸನ್ಮಾನಿಸಿರುವುದರಿಂದ ಖುಷಿ ಆಗಿದೆ. ಯಜಮಾನರು ತುಂಬಾ ಚೆನ್ನಾಗಿ ಕೋಣ ಸಾಕಿದ್ದರಿಂದ ನಾನು ಅಷ್ಟೊಂದು ಸ್ಪೀಡಾಗಿ ಓಡುವುದು ಸಾಧ್ಯವಾಯಿತು. ಮಾರ್ಚ್ 10ರವರೆಗೆ ಕಂಬಳ ಇದೆ. ಕಂಬಳ ಮುಗಿದ ಬಳಿಕ ರಾಷ್ಟ್ರಮಟ್ಟದಲ್ಲಿ ಆಟವಾಡಲು ಕೇಂದ್ರ ಕ್ರೀಡಾ ಇಲಾಖೆ ತರಬೇತುದಾರರು ನೀಡುವ ತರಬೇತಿ ಪಡೆಯುತ್ತೇನೆ ಎಂದು ಶ್ರೀನಿವಾಸಗೌಡ ಹೇಳಿದ್ದಾರೆ.
‘ಕಂಬಳ ವೀರ’ನಿಗೆ ಖಾಲಿ ಕವರ್ ಸನ್ಮಾನ!
Follow Us