ಮೈಸೂರು: ಲಕ್ಷ್ಮಣತೀರ್ಥ ನದಿಯ ಹಿನ್ನೀರಿನಲ್ಲಿ ದನ ತೊಳೆಯಲು ಹೋದ ತಂದೆ ಮಗ ಮುಳುಗಿ ಮೃತಪಟ್ಟ ಘಟನೆ ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಮುಲೆಪೆಟ್ಲುನಲ್ಲಿ ಶುಕ್ರವಾರ ನಡೆದಿದೆ.
ಸುರೇಶ್ (45) ಮತ್ತು ಆತನ ಮಗ ವಿಕಾಸ್ (16) ಮೃತಪಟ್ಟ ತಂದೆ ಮಗ. ಸುರೇಶ್ ಮತ್ತು ವಿಕಾಸ್ ಹಿನ್ನೀರಿನ ಬಳಿ ಬುಧವಾರ ದನ ಮೇಯಿಸಲು ತೆರಳಿದ್ದರು. ಸುರೇಶ್ ಅವರು ದನಗಳನ್ನು ತೊಳೆಯಲು ನೀರಿಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಗಾಳಿ, ಮಳೆ ಪ್ರಾರಂಭವಾದ್ದರಿಂದ ಬೆದರಿದ ದನ ಹಗ್ಗ ಹಿಡಿದಿದ್ದ ಸುರೇಶ್ ಅವರನ್ನು ನೀರಿಗೆ ಎಳೆದಿದೆ. ಮುಳುಗುತ್ತಿದ್ದ ತಂದೆಯನ್ನು ರಕ್ಷಿಸಲು ಪುತ್ರ ವಿಕಾಸ ಸಹ ನೀರಿಗೆ ಧುಮುಕಿದ್ದಾರೆ. ಆದರೆ, ನದಿಯಲ್ಲಿ ಮರಳು ತೆಗೆದು ಆಳವಾದ ಗುಂಡಿಗಳು ಇದ್ದದ್ದರಿಂದ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈಜುಗಾರರ ಸಹಾಯದಿಂದ ಶವಗಳನ್ನು ನೀರಿನಿಂದ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಪೊಲೀಸರು ಶವಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ. ಘಟನೆ ಸಂಬಂಧ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಲ್ಲಿ ಮುಳುಗಿ ಮೃತಪಟ್ಟ ತಂದೆ, ಮಗ
Follow Us