ಬೆಂಗಳೂರು: ಚಂದನವನದಲ್ಲಿ ಮಾದಕ ದ್ರವ್ಯ ಜಾಲದ ನಂಟಿನ ತನಿಖೆ ನಡೆಸುತ್ತಿರುವ ಸಿಸಿಬಿ ನಟಿ ಐಂದ್ರಿತಾ ಮತ್ತು ಅವರ ಪತಿ ದಿಗಂತ್ ಅವರ ಮೊದಲ ಹಂತದ ವಿಚಾರಣೆ ಪೂರ್ತಿಗೊಳಿಸಿದೆ. ಹತ್ತಿರ ಹತ್ತಿರ ಮೂರು ಗಂಟೆಗಳ ಕಾಲ ತಾರಾ ದಂಪತಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಗುರಿಪಡಿಸಲಾಗಿದೆ.
ಮುಖ್ಯವಾಗಿ ಈಗಾಗಲೇ ಬಂಧನದಲ್ಲಿರುವ ಪ್ರತೀಕ್ ಶೆಟ್ಟಿ ಮತ್ತು ವೈಭವ ಜೈನ್ ಜತೆಗಿನ ಸಂಪರ್ಕದ ಬಗ್ಗೆ ಪ್ರಮುಖವಾಗಿ ಪ್ರಶ್ನೆ ಕೇಳಲಾಗಿದೆ. ಜತೆಗೆ ಇತರ ಡ್ರಗ್ಸ್ ಪೆಡ್ಲರ್ ಜತೆ ಸಂಬಂಧ ಹೊಂದಿದ್ದಾರೆಯೇ ಎಂಬ ಬಗ್ಗೆ ಕೂಡ ಪ್ರಶ್ನಿಸಲಾಗಿದೆ. ಐಂದ್ರಿತಾ ಮತ್ತು ದಿಗಂತ್ ಈ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ನಟಿ ಸಂಜನಾ ಮಾದರಿಯಲ್ಲಿ ಐಂದ್ರಿತಾ ಕೂಡ ಸಿಮ್ ರಹಿತ ಮೊಬೈಲ್ ಗಳನ್ನು ಬಳಸುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಆದರೆ ಇದನ್ನು ತನಿಖಾ ಅಧಿಕಾರಿಗಳು ದೃಢೀಕರಿಸಿಲ್ಲ. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತನಿಖಾಧಿಕಾರಿಗಳ ಜತೆ ಸಮಾಲೋಚನೆ ನಡೆಸಲಿದ್ದಾರೆ. ಆ ಬಳಿಕ ಮುಂದಿನ ವಿಚಾರಣೆಯ ಸ್ವರೂಪ ನಿರ್ಧಾರವಾಗಲಿದೆ.