ಬೆಂಗಳೂರು: ಸಕಲ ಸರ್ಕಾರಿ ಗೌರವಗಳೊಂದಿಗೆ ನಾಳೆ (ಭಾನುವಾರ) ಡಾ.ಚಿದಾನಂದಮೂರ್ತಿಯವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
‘ಚಿದಾನಂದಮೂರ್ತಿಯವರ ಸಾವು ನೋವುಂಟುಮಾಡಿದೆ. ಕನ್ನಡ ನಾಡು, ನುಡಿ ಅಸ್ಮಿತೆಗಾಗಿ ಹೋರಾಟ ಮಾಡುತ್ತಿದ್ದವರು. ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಾ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಯಡಿಯೂರಪ್ಪ ಕಂಬನಿ ಮಿಡಿದಿದ್ದಾರೆ.
ಹಂಪಿಯಲ್ಲಿ ಅಂತ್ಯಕ್ರಿಯೆ?:
ಇತಿಹಾಸಜ್ಞರೂ ಆಗಿದ್ದ ಚಿಮೂಗೆ ಹಂಪಿಯ ಜತೆ ವಿಶಿಷ್ಟ ನಂಟು ಇತ್ತು. ತಮ್ಮ ಕೊನೆಯ ಪಯಣ ಹಂಪಿಯಲ್ಲೇ ಆಗಲಿ ಎಂದು ಚಿಮೂ ಬಯಸಿದ್ದರು. ಹಾಗಾಗಿ ಹಂಪಿ ವಿವಿಯಲ್ಲಿ ಅನುಮತಿ ಸಿಕ್ಕರೆ ಅಲ್ಲೇ ಸಮಾಧಿ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಇಲ್ಲದಿದ್ದರೆ ಚಾಮರಾಜಪೇಟೆಯಲ್ಲೇ ಅಂತ್ಯಸಂಸ್ಕಾರ ನೇರವೇರಲಿದೆ.
ನಾಳೆ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಅಂತಿಮ ದರ್ಶನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ವೀರಶೈವ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ಮಾಡಲು ತೀರ್ಮಾನಿಸಲಾಗಿದೆ.
ಅಂತಿಮ ದರ್ಶನ:
ಶನಿವಾರ ಬೆಳಗಿನ ಜಾವ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಡಾ.ಚಿದಾನಂದಮೂರ್ತಿ ಅವರ ಪಾರ್ಥಿವ ಶರೀರವನ್ನು ಮನೆಗೆ ಸ್ಥಳಾಂತರಿಸಲಾಗಿದೆ. ಅನೇಕ ಗಣ್ಯರು, ಸಂಬಂಧಿಕರು, ಗೆಳೆಯರು ಚಿಮೂ ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ವಿದೇಶದಿಂದ ಸಂಬಂಧಿಕರು ಹಾಗೂ ಸ್ನೇಹಿತರು ಆಗಮಿಸುವ ಹಿನ್ನೆಲೆಯಲ್ಲಿ ಚಿದಾನಂದಮೂರ್ತಿಯವರ ಅಂತ್ಯಸಂಸ್ಕಾರವನ್ನು ನಾಳೆ (ಭಾನುವಾರ) ನಡೆಸಲು ಅವರ ಕುಟುಂಬಸ್ಥರು ನಿರ್ಧರಿಸಿದ್ದಾರೆ. ಚಿಮೂ ಅವರಿಗೆ ಪತ್ನಿ ವಿಶಾಲಾಕ್ಷಿ, ಮಗ ವಿನಯಕುಮಾರ್, ಮಗಳು ಶೋಭಾ ಇದ್ದಾರೆ. ಚಿಮೂ ಅವರ ಆಶಯದಂತೆ ಪಾರ್ಥಿವ ಶರೀರಕ್ಕೆ ಯಾವುದೇ ಪೂಜೆ-ಪುನಸ್ಕಾರ ಮಾಡುವುದಿಲ್ಲ ಎಂದು ಚಿಮೂ ಮಗ ವಿನಯ್ಕುಮಾರ್ ತಿಳಿಸಿದ್ದಾರೆ.
ಸರ್ಕಾರಿ ಗೌರವದೊಂದಿಗೆ ನಾಳೆ ಚಿಮೂ ಅಂತ್ಯಕ್ರಿಯೆ
Follow Us