newsics.com
ಕೊಪ್ಪಳ: ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆ ಅಬ್ಬರಕ್ಕೆ ಕೊಪ್ಪಳ ಜಿಲ್ಲೆಯ ಜನ ತತ್ತರಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಕೊಪ್ಪಳ ಜಿಲ್ಲೆಯ ಹಲವೆಡೆ ಮಳೆ ಅನಾಹುತಗಳು ಸಂಭವಿಸಿವೆ.
ಕೊಪ್ಪಳ ತಾಲೂಕಿನ ಭೈರಾಪುರ ಹಳ್ಳ ತುಂಬಿ ಹರಿಯುತ್ತಿದ್ದು, ನಿಲೋಗಿಪುರದ ರೈತರೊಬ್ಬರ ಟ್ರ್ಯಾಕ್ಟರ್ ಹಳ್ಳದಲ್ಲಿ ಕೊಚ್ಚಿ ಹೋಗಿದೆ. ಟ್ರ್ಯಾಕ್ಟರ್‌ನ್ನು ಜೆಸಿಬಿ ಮೂಲಕ ಮೇಲೆತ್ತಲು ರೈತರು ಜೀವದ ಹಂಗು ತೊರೆದು ಹರಸಾಹಸಪಟ್ಟಿದ್ದು, ಕೊನೆಗೂ ಟ್ರ್ಯಾಕ್ಟರ್ ಮೇಲೆತ್ತಲಾಗಿದೆ.
ಬೈರಾಪುರ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಕೊಪ್ಪಳ ತಾಲೂಕು ಬೊಚನಹಳ್ಳಿ- ನಿಲೋಗಿಪುರ ಸಂಪರ್ಕ ಬಹುತೇಕ ಕಡಿತಗೊಂಡಿದೆ. ಇದರಿಂದಾಗಿ ರೈತರು ತಮ್ಮ ಹೊಲಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಕುಷ್ಟಗಿ ತಾಲೂಕಿನ ಶಹಪುರದಲ್ಲಿ ಕಳಕೇಶ್ ಚೌಡ್ಕಿ ಎಂಬುವರ ಮನೆ ಗೋಡೆ ಕುಸಿದಿದೆ. ಅಳವಂಡಿ ಮತ್ತು ಕಂಪ್ಲಿ ಮಾರ್ಗ ಸಂಪರ್ಕಿಸುವ ಹಳ್ಳ ತುಂಬಿ ಹರಿಯುತ್ತಿದೆ. ಆದರೂ ಅನಿವಾರ್ಯವಾಗಿ ಜನರು ಅಪಾಯ ಲೆಕ್ಕಿಸದೇ ಸಂಚರಿಸುತ್ತಿದ್ದಾರೆ.