ಬೆಂಗಳೂರು: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಷರತ್ತು ಉಲ್ಲಂಘಿಸಿದ ಆರೋಪದ ಮೇಲೆ ಬಿಡದಿಯ ನಿತ್ಯಾನಂದ ಸ್ವಾಮೀಜಿ ಅವರ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಸ್ವಾಮೀಜಿಗೆ ರಾಮನಗರ ಸೆಷನ್ಸ್ ನ್ಯಾಯಾಲಯ 2010 ರಲ್ಲಿ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿ ದೂರುದಾರ ಕುರುಪ್ಪನ್ ಲೆನಿನ್ ಅರ್ಜಿ ಸಲ್ಲಿಸಿದ್ದರು.
2018ರ ಜೂನ್ 5ರಲ್ಲಿ ಕೊನೆಯ ವಿಚಾರಣೆಗೆ ಹಾಜರಾಗಿದ್ದ ಸ್ವಾಮೀನಿ ನಂತರ ಅವಧಿ ಮುಗಿದ ಪಾಸ್ ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಜಾಮೀನು ರದ್ದುಗೊಳಿಸುವಂತೆ ಆದೇಶಿಸಿರುವ ನ್ಯಾಯಪೀಠ, ಜಾಮೀನು ಪಡೆಯುವ ವೇಳೆ ಅವರು ನೀಡಿದ್ದ ಶ್ಯೂರಿಟಿ ಹಣವನ್ನೂ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ. ಇದರಿಂದ ನಿತ್ಯಾನಂದ ಸ್ವಾಮೀಜಿಗೆ ಬಂಧನ ಭೀತಿ ಎದುರಾಗಿದೆ.