ಬೆಂಗಳೂರು: ಕೊರೋನಾ ಲಕ್ಷಣರಹಿತ, ಬೇರೆ ರೋಗಲಕ್ಷಣಗಳಿಲ್ಲದ ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲು ರಾಜ್ಯ ಸರ್ಕಾರ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು, ಹೋಂ ಐಸೋಲೇಶನ್ ನಲ್ಲಿರುವವರ ಮೇಲೆ ನಿಗಾ ವಹಿಸಲು ಪ್ರತ್ಯೇಕ ಕಾಲ್ ಸೆಂಟರ್ ಸ್ಥಾಪಿಸಲಾಗುವುದು ಎಂದಿದ್ದಾರೆ.
ತಜ್ಞರ ಸಮಿತಿಯ ವರದಿಯ ಮೇರೆಗೆ ಹೋಂ ಐಸೋಲೇಶನ್ಗೆ ಸರ್ಕಾರ ಸಮ್ಮತಿಸಿದೆ ಎಂದು ಸಚಿವ ಸುಧಾಕರ್ ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದರು.
ಅಚ್ಚರಿಯ ವಿಚಾರವೆಂದರೆ, ನಿನ್ನೆವರೆಗೂ ಸರ್ಕಾರಕ್ಕೆ ಕೊರೋನಾ ತಡೆಗೆ ಗಂಭೀರ ಕ್ರಮಗಳನ್ನು ಕೈಗೊಳ್ಳಬೇಕೆನೆದು ಹೇಳುತ್ತಿದ್ದ ತಜ್ಞರ ಸಮಿತಿ ಇದ್ದಕ್ಕಿದ್ದ ಹಾಗೆ ಹೋಂ ಐಸೋಲೇಶನ್ಗೆ ಒಪ್ಪಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ.
ಗ್ರಾಮೀಣ ಭಾಗದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಕೋವಿಡ್ ನಿರ್ವಹಣೆಗೆ ಬೂತ್ ಮಟ್ಟದ ಟಾಸ್ಕ್ ಫೋರ್ಸ್ ಕಮಿಟಿ ರಚಿಸಲಾಗಿದ್ದು, ಬೆಂಗಳೂರಿನಲ್ಲಿ ಒಟ್ಟು 8800 ಇಂತಹ ಕಮಿಟಿಗಳು ಕಾರ್ಯನಿರ್ವಹಿಸಲಿವೆ ಎಂದು ಸಚಿವ ಸುಧಾಕರ್ ಹೇಳಿದರು.
ಹೋಂ ಐಸೋಲೇಶನ್ ಮಾರ್ಗಸೂಚಿಯ ಅಂಶಗಳು:
1. ಕೇವಲ ಲಕ್ಷಣರಹಿತ ಮತ್ತು ಬೇರೆ ರೋಗ ಲಕ್ಷಣ ಇರದ ಹಾಗೂ ಕೋವಿಡ್ ಧೃಢಪಟ್ಟಿರುವ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸೋಂಕಿತರನ್ನು ಹೋಂ ಐಸೋಲೇಶನ್ ಮಾಡಬಹುದು.
2. ಹೋಂ ಐಸೋಲೆಶನ್ ನಲ್ಲಿರುವವರು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯ ಪಾಲಿಸುವುದು
3. ಆರೋಗ್ಯಾಧಿಕಾರಿಗಳು ಮನೆಗೆ ಭೇಟಿ ನೀಡಿ ಹೋಂ ಐಸೋಲೇಶನ್ ಮಾಡಲು ಸೂಕ್ತವಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು.
4. ಸಂಬಂಧಪಟ್ಟ ಆರೋಗ್ಯಾಧಿಕಾರಿಗಳಲ್ಲಿ ಹೋಂ ಐಸೋಲೇಶನ್ ನಲ್ಲಿರುವವರು ಪ್ರತಿನಿತ್ಯ ತಪಾಸಣೆ ಮಾಡಿಸಿಕೊಳ್ಳುವುದು.
5. ಹೋಂ ಐಸೋಲೇಶನ್ ನಲ್ಲಿರುವ ವ್ಯಕ್ತಿಯ ಹತ್ತಿರ ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ಮಾಮೀಟರ್, ಪಿಪಿಇ ಸೇರಿದಂತೆ ಅಗತ್ಯ ಸಲಕರಣೆಗಳು ಲಭ್ಯವಿರುವುದು ಅಗತ್ಯ.