ಬೆಂಗಳೂರು: ರಾಜ್ಯದ ಮತ್ತೊಬ್ಬ ಸಚಿವರು ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಗೃಹ ಸಚಿವ ಬಸವ ರಾಜ್ ಬೊಮ್ಮಾಯಿ ಇದೀಗ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ತಮ್ಮ ಮನೆಯ ಕೆಲಸಗಾರರೊಬ್ಬರಿಗೆ ಕೊರೋನಾ ಸೋಂಕು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಾನು ಕೂಡ ಪರೀಕ್ಷೆಗೆ ಒಳಗಾಗಿದ್ದೆ. ಇದೀಗ ನನಗೂ ಸೋಂಕು ದೃಢಪಟ್ಟಿದೆ ಎಂದು ಬೊಮ್ಮಾಯಿ ಸಾಮಾಜಿಕ ಜಾಲ ತಾಣದ ಮೂಲಕ ಬಹಿರಂಗಪಡಿಸಿದ್ದಾರೆ.
ತಮ್ಮ ಜತೆ ಒಡನಾಟಕ್ಕೆ ಬಂದಿದ್ದವರು ಪರೀಕ್ಷೆ ನಡೆಸಿ ಎಂದು ಕೂಡ ಬೊಮ್ಮಾಯಿ ಮನವಿ ಮಾಡಿದ್ದಾರೆ. ಮಾದಕ ದ್ರವ್ಯ ತನಿಖೆ ಸಂಬಂಧ ಸಚಿವ ಬೊಮ್ಮಾಯಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ನಿರಂತರವಾಗಿ ಭಾಗವಹಿಸಿದ್ದರು. ಇದೀಗ ಸಭೆಯಲ್ಲಿ ಭಾಗವಹಿಸಿದ ಪೊಲೀಸ್ ಅಧಿಕಾರಿಗಳು ಕೂಡ ಕೊರೋನಾ ಪರೀಕ್ಷೆಗೆ ಒಳಪಡುವ ಸಾಧ್ಯತೆಯಿದೆ.