ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಜುಲೈ 1 ರಿಂದ ತೆರೆಯಲು ದೇವಸ್ಥಾನ ಆಡಳಿತ ಮಂಡಳಿ ನಿರ್ಧರಿಸಿದೆ.
ಕೊರೊನಾ ಆತಂಕದಿಂದಾಗಿ ಮೂರು ತಿಂಗಳಿಂದ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಬಂದ್ ಆಗಿತ್ತು. ಜೂನ್ 8 ರಿಂದ ರಾಜ್ಯದ ಹಲವು ದೇವಾಲಯಗಳು ತೆರೆದಿದ್ದರೂ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಜುಲೈ 1 ರಿಂದ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಿರುವುದಾಗಿ ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.
ದೇವಾಲಯ ಆಡಳಿತ ಮಂಡಳಿ ಭಕ್ತರ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಭಕ್ತರು ಕಡ್ಡಾಯವಾಗಿ ಪಾಲಿಸುವಂತೆ ಮನವಿ ಮಾಡಿಕೊಂಡಿದೆ. ದೇವಾಲಯಕ್ಕೆ ಬರುವವರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆನ್ ಲೈನ್ ನಲ್ಲಿ ಪಾಸ್ ಪಡೆದು ಬರಬೇಕು. ದರ್ಶನಕ್ಕೆ ಆನ್ ಲೈನ್ ಟಿಕೆಟ್ ಕಡ್ಡಾಯ ಎಂದು ದೇವಸ್ಥಾನದ ಮಂಡಳಿ ತಿಳಿಸಿದೆ.