♦ ಡಿಸಿ ನಂಬರನ್ನೇ ಕೊಟ್ಟು ಯಾಮಾರಿಸಿದ ಕೊರೋನಾ ಸೋಂಕಿತ!
ಮೈಸೂರು: ನಿಮಗೆ ಕೊರೋನಾ ಪಾಸಿಟಿವ್ ಇದೆ, ನಿಮ್ಮನ್ನೀಗ ಆಸ್ಪತ್ರೆಗೆ ದಾಖಲಿಸಬೇಕು, ನೀವೀಗ ಎಲ್ಲಿದ್ದೀರಾ ಎಂದು ಕೋವಿಡ್ ಕೇಂದ್ರದಿಂದ ಜಿಲ್ಲಾಧಿಕಾರಿಗೇ ಕರೆಮಾಡಿದ ಅಚ್ಚರಿಯ ಪ್ರಸಂಗವೊಂದು ಮೈಸೂರಿನಲ್ಲಿ ನಡೆದಿದೆ.
ಈ ಕರೆಯಿಂದ ಕಂಗಾಲಾದ ಜಿಲ್ಲಾಧಿಕಾರಿ ಅಭಿರಾಮ್ ಶಂಕರ್ ಕಂಗಾಲಾಗಿ, ‘ನನಗೆಲ್ಲಿ ಪಾಸಿಟಿವ್ ಬಂದಿದೇರಿ? ನಾನು ಜಿಲ್ಲಾಧಿಕಾರಿ ಕಣ್ರೀ’ ಎಂದಾಗ ಕೋವಿಡ್ ಕೇಂದ್ರದ ಸಿಬ್ಬಂದಿ ತಬ್ಬಿಬ್ಬು.
ಕೊರೋನಾ ಪರೀಕ್ಷೆ ವೇಳೆ ಹೆಬ್ಬಾಳದ ನಿವಾಸಿಯೊಬ್ಬ ತನ್ನ ಮೊಬೈಲ್ ನಂಬರ್ ಬದಲು ಜಿಲ್ಲಾಧಿಕಾರಿ ನಂಬರ್ ಕೊಟ್ಟು ಅಧಿಕಾರಿಗಳನ್ನೇ ಯಾಮಾರಿಸಿದ್ದಾನೆ.
ಕೊರೋನಾ ಸೋಂಕಿತರ ಏರಿಕೆಯಲ್ಲಿ ಬೆಂಗಳೂರೇ ನಂ.1
ನಗರದ ಹೆಬ್ಬಾಳದ ನಿವಾಸಿ ಗಂಟಲು ದ್ರವ ಸಂಗ್ರಹ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾಗ ಇಂತಹ ವಂಚನೆ ಮಾಡಿದ್ದಾನೆ. ಈತನ ಸೋಂಕು ಪರೀಕ್ಷಾ ವರದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದ ಆತ ಕೊಟ್ಟಿದ್ದ ನಂಬರ್ಗೆ ಸಿಬ್ಬಂದಿ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಮಾತನಾಡಿ ತಾವೇ ಜಿಲ್ಲಾಧಿಕಾರಿ ಎಂದಾಗ ಸತ್ಯಾಂಶ ತಿಳಿದ ಕೋವಿಡ್ ಕೇರ್ ಸೆಂಟರ್ ಅಧಿಕಾರಿಗಳು ಗಾಬರಿಯಾಗಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಶಂಕರ್, ಕ್ವಾರಂಟೈನ್ಗೆ ಒಳಗಾಗುವುದು ಮತ್ತು ಆಸ್ಪತ್ರೆಗೆ ದಾಖಲಾಗುವುದರಿಂದ ತಪ್ಪಿಸಿಕೊಳ್ಳಲು ಕೆಲ ಸೋಂಕಿತರು ಏನೆಲ್ಲ ಕರಾಮತ್ತು
ಮಾಡುತ್ತಾರೆ ಎಂಬುದನ್ನು ತಿಳಿದು ಒಂದು ಕ್ಷಣ ನನಗೆ ಅಚ್ಚರಿಯಾಯಿತು. ಜತೆಗೆ ನಗುವೂ ಬಂತು
ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರೂ ಸಹಕಾರ ನೀಡಬೇಕು. ಸೂಕ್ತ ಮಾಹಿತಿ ನೀಡಬೇಕು. ಒಂದು ವೇಳೆ ಸಂಪರ್ಕಿಸುವ ಮಾಹಿತಿ ತಪ್ಪಾದರೆ ಕೊರೋನಾ ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಗುರುತಿಸುವುದು ಕಷ್ಟವಾಗಲಿದೆ. ದಾರಿ ತಪ್ಪಿಸುವ ಕೆಲಸ ಬಿಟ್ಟು ಕೋವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜನರು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಅವರು ಮನವಿ ಮಾಡಿದ್ದಾರೆ. ಈಗ ಹೆಬ್ಬಾಳದ ನಿವಾಸಿಯನ್ನು ಹುಡುಕುವ ಕಾರ್ಯ ನಡೆದಿದೆ.