ಬೆಂಗಳೂರು: ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಶುಕ್ರವಾರ (ಜುಲೈ 31) ನೇಮಕವಾಗಿದ್ದಾರೆ.
ಈ ಬಗ್ಗೆ newsics.com ಗುರುವಾರವೇ (ಜುಲೈ 30) ವರದಿ ಪ್ರಕಟಿಸಿತ್ತು. ಆಗಸ್ಟ್ 2 ಕ್ಕೆ ಭಾಸ್ಕರ್ ರಾವ್ ಅವರ ಒಂದು ವರ್ಷ ಅವಧಿ ಮುಗಿಯುವುದರಿಂದ ಕಮಲ್ ಪಂತ್ ಅವರನ್ನು ನೂತನ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.
ನಿರ್ಗಮಿತ ಭಾಸ್ಕರ್ ರಾವ್ ಮತ್ತು ನೂತನ ಪೊಲೀಸ್ ಆಯುಕ್ತ ಪಂತ್ 1990 ರ ಐಪಿಎಸ್ ಬ್ಯಾಚ್’ನವರು. ನಗರ ಪೊಲೀಸ್ ಆಯುಕ್ತ ಹುದ್ದೆಗೆ ಪಂತ್ ಅವರಲ್ಲದೆ ಸುನೀಲ್ ಅಗರ್ ವಾಲ್ ಮತ್ತು ಅಮೃತ್ ಪೌಲ್ ಕೂಡ ಆಕಾಂಕ್ಷಿಗಳಾಗಿದ್ದರು. ಎಡಿಜಿಪಿ ಬಿ. ದಯಾನಂದ ಅವರನ್ನು ಗುಪ್ತದಳಕ್ಕೆ ವರ್ಗಾಯಿಸಲಾಗಿದೆ. ಆದರೆ ಒಂದು ವರ್ಷದ ಅವಧಿಗಾಗಿ ಭಾಸ್ಕರ್ ರಾವ್ ಅವರನ್ನು ನೇಮಲಕ ಮಾಡಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಯಸಿದ್ದರು. ಮತ್ತು ಒಂದು ವರ್ಷದ ಬಳಿಕ ಕಮಲ್ ಪಂತ್ ಅವರಿಗೆ ಅವಕಾಶ ನೀಡುವ ಬಗ್ಗೆಯೂ ಭರವಸೆ ನೀಡಿದ್ದರು ಎಂದು ಹೇಳಲಾಗಿದೆ. ಅಮೃತ್ ಪೌಲ್ ಅವರನ್ನು ಇದೇ ವರ್ಷದ ಜನವರಿ ಅಂತ್ಯದಲ್ಲಿ ಎಡಿಜಿಪಿಯಾಗಿ ಬಡ್ತಿ ನೀಡಲಾಗಿತ್ತು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ.
ಅದೇ ರೀತಿ ಆರ್ಥಿಕ ಅಪರಾಧಗಳು ಮತ್ತು ಅಪರಾಧ ತನಿಖಾ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಬಿ.ದಯಾನಂದ ಅವರನ್ನು ಕಮಲ್ ಪಂತ್ ಅವರ ವರ್ಗಾವಣೆಯಿಂದ ತೆರವಾದ ಗುಪ್ತಚರ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್
Follow Us