ಬೆಂಗಳೂರು: ಈಗಾಗಲೇ ಲಾಕ್ ಡೌನ್ ನಿಂದ ಕಂಗೆಟ್ಟು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸುತ್ತಿರುವ ಕೆ.ಎಸ್.ಆರ್.ಟಿ.ಸಿ ನಷ್ಟದಿಂದ ಹೊರಬರುವ ಪ್ರಯತ್ನ ಆರಂಭಿಸಿದ್ದು ಹೊರ ರಾಜ್ಯಗಳಿಗೆ ಬಸ್ ಸೇವೆ ಆರಂಭಿಸಲು ಚಿಂತನೆ ನಡೆಸಿದೆ.
ಈ ಬಗ್ಗೆ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೋಮವಾರ ಮಾಹಿತಿ ನೀಡಿದ್ದು, ಮೂರ್ನಾಲ್ಕು ದಿನಗಳಲ್ಲಿ ಬಸ್ ಸೇವೆ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಹೊರತುಪಡಿಸಿ ಉಳಿದ ರಾಜ್ಯಗಳಿಗೆ ಬಸ್ ಸೇವೆ ಆರಂಭಿಸಲು ಚಿಂತನೆ ನಡೆದಿದ್ದು ಎಲ್ಲಾ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಒಪ್ಪಿಗೆ ಸಿಕ್ಕಲ್ಲಿ ಬಸ್ ಸೇವೆ ಆರಂಭಿಸಲಿದ್ದೇವೆ ಎಂದರು.
ಈಗಾಗಲೇ ರಾಜ್ಯದಲ್ಲಿ ಹವಾನಿಯಂತ್ರಿತ ಬಸ್ ಸಂಚಾರವೂ ಆರಂಭವಾಗಿದೆ. ಹೊರ ರಾಜ್ಯಗಳಿಗೂ ಬಸ್ ಸೇವೆ ಆರಂಭಿಸುವಂತೆ ಒತ್ತಡ ಬಂದಿರೋದರಿಂದ ಈ ಪ್ರಯತ್ನ ನಡೆದಿದೆ ಎಂದಿದ್ದಾರೆ.
ಲಾಕ್ ಡೌನ್ ನಿಂದ ಕೆ.ಎಸ್.ಆರ್.ಟಿ.ಸಿ 2.2 ಸಾವಿರ ಕೋಟಿ ನಷ್ಟದಲ್ಲಿದೆ. ನಷ್ಟ ತುಂಬಿಕೊಡಲು ದರ ಏರಿಸುವುದಿಲ್ಲ. ಬದಲಾಗಿ ಸೋರಿಕೆ ತಡೆಯುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.