ಬೆಂಗಳೂರು: ಬೆಂಗಳೂರು ನಗರದಲ್ಲಿ ಮುಂದಿನ ವರ್ಷದಿಂದ ‘ಮಲೆಗಳಲ್ಲಿ ಮದುಮಗಳು’ ರಂಗಪ್ರಯೋಗ ಪ್ರದರ್ಶನಗೊಳ್ಳುವುದಿಲ್ಲ! ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿಗರಿಗೆ ಮಲೆನಾಡಿನ ಸವಿಯನ್ನುಣಿಸುತ್ತಿದ್ದ ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿ ಆಧಾರಿತ ರಂಗಪ್ರಯೋಗ ಫೆ. 29ಕ್ಕೆ ಕೊನೆಗೊಳ್ಳಲಿದೆ.
ಮುಂದಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಹೋರಾತ್ರಿ ರಂಗಪ್ರಯೋಗ ನಡೆಸದಿರಲು ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ನಿರ್ಧರಿಸಿದೆ. ಬದಲಿಗೆ, ನಾಡಿನ ಇತರ ನಗರಗಳಲ್ಲಿ ನಾಟಕವನ್ನು ಪ್ರದರ್ಶನ ನಡೆಸಲು ಚಿಂತನೆ ನಡೆಸಿದೆ.
ಜೊತೆಗೆ, ಈ ಪ್ರಯೋಗದ ಯಶಸ್ಸಿನಿಂದ ಪ್ರೇರಣೆಗೊಂಡಿರುವ ಎನ್ ಎಸ್ ಡಿ, ಈಗ ಬಸವಣ್ಣ ಅವರ ಅನುಭವವನ್ನು ರಂಗರೂಪಕ್ಕಿಳಿಸಲು ಮುಂದಾಗಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಈ ಪ್ರಯೋಗಗಳು ನಡೆಯಲಿದೆ ಎಂದು ಎನ್ ಎಸ್ ಡಿ ನಿರ್ದೇಶಕ ಬಸವಲಿಂಗಯ್ಯ ಮಾಹಿತಿ ನೀಡಿದ್ದಾರೆ.