newsics.com
ಚಿತ್ರದುರ್ಗ/ ಬಾಗಲಕೋಟೆ: ನಾಡಿನ ಜನಪ್ರಿಯ ಕಥೆಗಾರಲ್ಲಿ ಒಬ್ಬರಾಗಿದ್ದ ಹಿರಿಯ ಸಾಹಿತಿ, ಕಥೆಗಾರ ಬಾಗಲಕೋಟೆಯ ಅಬ್ಬಾಸ್ ಮೇಲಿನಮನಿ (66) ಸೋಮವಾರ ಹೃದಯಾಘಾತದಿಂದ ನಿಧನರಾದರು.
ಸಮಕಾಲೀನ ಪೀಳಿಗೆಯ ಕಥೆಗಾರರಲ್ಲಿ ಬಹು ಮುಖ್ಯರಾಗಿದ್ದ ಅಬ್ಬಾಸ್ ಮೇಲಿನಮನಿ, ತಮ್ಮ ಸಂವೇದನಾಶೀಲ ಕಥೆಗಳಿಗೆ ಹೆಸರಾಗಿದ್ದರು.
ಚಿತ್ರದುರ್ಗದ ಮಗಳ ಮನೆಯಲ್ಲಿದ್ದಾಗಲೇ ತೀವ್ರ ಹೃದಯಾಘಾತವಾಗಿದ್ದು, ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೆ ಕೊನೆಯುಸಿರೆಳೆದರು. ಭಾನುವಾರವೇ ಒಮ್ಮೆ ಹೃದಯಾಘಾತವಾಗಿದ್ದು, ಸೋಮವಾರ ಮತ್ತೊಮ್ಮೆ ಹೃದಯಾಘಾತವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ನಾಳೆ (ಸೆ.22) ಬೆಳಗ್ಗೆ ಬಾಗಲಕೋಟೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಮೂಲತಃ ಬಾಗಲಕೋಟೆಯವರಾದ ಅಬ್ಬಾಸ್ ಮೇಲಿನಮನಿ ಅವರು, ಪದವಿ ಶಿಕ್ಷಣದವರೆಗೆ ಬಾಗಲಕೋಟೆಯಲ್ಲಿ ವ್ಯಾಸಂಗ ಮಾಡಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದರು.
ನೇರ, ನಿಷ್ಠುರತೆಯ ಸ್ವಭಾವ ಹೊಂದಿದ್ದ ಅಬ್ಬಾಸ್ ಮೇಲಿನಮನಿ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷವಾದ ಹೆಸರು ಗಳಿಸಿದವರು. ಯಾವುದೇ ಅಗ್ಗದ ಪ್ರಚಾರದ ಹಿಂದೆ ಬೀಳದ ಅವರು, ಇದ್ದದನ್ನು ಇದ್ದ ಹಾಗೇ ನೇರವಾಗಿ ಹೇಳುವ ಎದೆಗಾರಿಕೆ ಹೊಂದಿದ್ದರು. ನಿಷ್ಠುರತೆಯ ಕತೆಗಾರಾಗಿ ಗುರುತಿಸಿಕೊಂಡು ಸಾಹಿತ್ಯದ ಕೃಷಿ ಮಾಡಿದ್ದಾರೆ.
ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇವರ ಕಥಾ ಸಂಕಲನಗಳು. ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು ಕವನ ಸಂಕಲನಗಳು, ಜನ್ನತ್ ಮೊಹಲ್ಲ ಇವರ ಕಾದಂಬರಿ.
ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ, ಶಿವಮೊಗ್ಗ ಕ.ಸಾ.ಪ. ಲಂಕೇಶ್ ಕಥಾ ಪ್ರಶಸ್ತಿ, ತುಷಾರ ಎಚ್.ಎಂ.ಟಿ. ಅತ್ಯುತ್ತಮ ಕಥಾ ಪ್ರಶಸ್ತಿಗಳು ಲಭಿಸಿವೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸದಸ್ಯರಾಗಿದ್ದರು.
ಹಿರಿಯ ಸಾಹಿತಿ, ಕಥೆಗಾರ ಅಬ್ಬಾಸ್ ಮೇಲಿನಮನಿ ಇನ್ನಿಲ್ಲ
Follow Us