newsics.com
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಸಲಹೆಗಾರರಾಗಿದ್ದ ಎಂ.ಬಿ.ಮರಮಕಲ್ ಅವರ ನೇಮಕವನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮುಖ್ಯಮಂತ್ರಿಯವರ ರಾಜಕೀಯ ಸಲಹೆಗಾರ ಹುದ್ದೆಯಿಂದ ಹಿರಿಯ ಪತ್ರಕರ್ತ ಎಂ.ಬಿ. ಮರಂಕಲ್ ಅವರನ್ನು ಸರ್ಕಾರ ತಕ್ಷಣದಿಂದ ಬಿಡುಗಡೆ ಮಾಡಿದೆ.
ತಕ್ಷಣದಿಂದ ಈ ಆದೇಶ ಜಾರಿಗೆ ಬರಲಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಮೊಹಮದ್ ನಯೀಮ್ ಮೊಮಿನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮರಂಕಲ್ ಅವರು ಸಿಎಂಗೆ ಭಾಷಣ ಪ್ರತಿ ಸಿದ್ಧಪಡಿಸುವುದರಿಂದ ಹಿಡಿದು ಪ್ರತಿ ಹಂತದಲ್ಲೂ ಯಡಿಯೂರಪ್ಪನವರಿಗೆ ರಾಜಕೀಯ ಸಲಹೆಗಳನ್ನು ನೀಡುತ್ತಿದ್ದರು. ಇದೀಗ ಅವರ ನೇಮಕ ರದ್ದು ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ದಿಢೀರ್ ಬೆಳವಣಿಗೆ ಹಿಂದೆ ಬಿಎಸ್’ವೈ ಪುತ್ರ ವಿಜಯೇಂದ್ರ ಅವರ ಪ್ರಭಾವ ಇದೆ ಎನ್ನಲಾಗುತ್ತಿದೆ.
ಈ ಪ್ರಕಟಣೆಯ ಪ್ರಕಾರ, ಮರಂಕಲ್ ಅವರು ಇನ್ಮುಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಸಲಹೆಗಾರ ಹುದ್ದೆಯಲ್ಲಿ ಇರುವುದಿಲ್ಲ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಪತನ ವೇಳೆ ಹಾಗೂ ಬಳಿಕ ಯಡಿಯೂರಪ್ಪ ಅವರಿಗೆ ಸಾಕಷ್ಟು ಸಲಹೆ ನೀಡಿದ್ದ ಎಂ.ಬಿ. ಮರಂಕಲ್ ಅವರನ್ನು ಸರ್ಕಾರ ಅನಾಮತ್ತಾಗಿ ಸೇವೆಯಿಂದ ಬಿಡುಗಡೆಗೊಳಿಸಿದೆ. ಈ ಮೂಲಕ ಎಂಎಲ್ಸಿ ಆಗುವ ಮರಂಕಲ್ ಕನಸು ಸದ್ಯಕ್ಕಂತೂ ನನಸಾಗುವ ಲಕ್ಷಣವಿಲ್ಲ ಎನ್ನಲಾಗಿದೆ.
ಸಿಎಂ ಯಡಿಯೂರಪ್ಪ ಅವರ ಅತ್ಯಾಪ್ತರಾಗಿದ್ದ ಎಂ.ಬಿ.ಮರಮಕಲ್ ಅವರನ್ನು 2019 ಅಕ್ಟೋಬರ್ನಲ್ಲಿ ಸಿಎಂ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ರಾಜಕೀಯ ಸಲಹೆಗಾರರ ನೇಮಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ ಸರ್ಕಾರ ಆದೇಶಿಸಿದೆ.