ಬೆಂಗಳೂರು: ಪ್ರಧಾನಿ ಮೋದಿ ಭಾನುವಾರದ (ಜೂನ್ 28) ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಕರ್ನಾಟಕದ ಕಾಮೇಗೌಡರ ಹೆಸರನ್ನು ಪ್ರಸ್ತಾಪಿಸಿ ಅವರ ಕಾರ್ಯವನ್ನು ಕೊಂಡಾಡಿದರು.
ಬಾಯಾರಿದ ಪಕ್ಷಿಗಳು ಮತ್ತು ಪ್ರಾಣಿಗಳಿಗಾಗಿ ತನ್ನದೇ ಹಣದಿಂದ 14 ಕೊಳಗಳನ್ನು ರಚಿಸಿ ಮಾದರಿಯಾಗಿರುವ ಮಂಡ್ಯದ 82 ವರ್ಷದ ಕಾಮೇಗೌಡರನ್ನು ನೆನಪು ಮಾಡಿಕೊಂಡರು. ಇವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.
ಕಾಮೆಗೌಡ ಯಾರು?:
ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದವರಾದ ಕಾಮೆಗೌಡರು, ಬಾಯಾರಿದ ಪಕ್ಷಿಗಳು ಮತ್ತು ಪ್ರಾಣಿಗಳಿಗಾಗಿ ಹಳ್ಳಿಯ ಬೆಟ್ಟದ ಪಕ್ಕದಲ್ಲಿ ಕೊಳಗಳನ್ನು ತಮ್ಮದೇ ಸ್ವಂತ ಹಣದಿಂದ ನಿರ್ಮಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಸುಮಾರು 4 ದಶಕಗಳ ಹಿಂದೆ ತನ್ನ ಕುರಿಗಳ ಹಿಂಡುಗಳನ್ನು ಕಾಮೆಗೌಡ ಅವರು ಮೇಯಿಸುತ್ತಿದ್ದ ವೇಳೆಯಲ್ಲಿ ತಮ್ಮ ಕುರಿಗಳಿಗೆ ನೀರು ಸಿಗದ್ದರಿಂದ ತಮ್ಮ ಹಳ್ಳಿಯಲ್ಲಿದ್ದ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು. ಇದಕ್ಕಾಗಿ 15 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ.
ಸಂಸದ ಪಿ ಸಿ ಮೋಹನ್ ಕೂಡ ಇವರ ಬಗ್ಗೆ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಮಂಡ್ಯ ಜಿಲ್ಲೆಯ ಮಲವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಕಾಮೇಗೌಡ ಅವರು ಇಡೀ ಬೆಟ್ಟದ ಪ್ರದೇಶವನ್ನು ಹಸಿರೀಕರಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಅಸಾಮಾನ್ಯ ವ್ಯಕ್ತಿತ್ವವನ್ನು ಹೊಂದಿದ್ದರೂ ಅವರು ಸಾಮಾನ್ಯ ಕೃಷಿಕರಾಗಿ ಪರಿಸರ ಕಾಳಜಿ ಮೆರೆಯುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.
