ಉಡುಪಿ: ಐದನೇ ತರಗತಿಯ ಈ ವಿದ್ಯಾರ್ಥಿನಿ ಈಗ ಕೊರೋನಾ ವಾರಿಯರ್ಸ್ ಆಗಿ ಬದಲಾಗಿದ್ದಾಳೆ.
ಇದರಲ್ಲೇನು ವಿಶೇಷ ಅಂತೀರಾ? ಈಕೆ ಹುಟ್ಟುತ್ತಲೇ ಎಡಗೈ ಸ್ವಾಧೀನ ಕಳೆದುಕೊಂಡಿದ್ದಾಳೆ. ಹೀಗಾಗಿ ಒಂದೇ ಕೈನಲ್ಲಿ ಮಾಸ್ಕ್ ಹೊಲಿಯುತ್ತಿದ್ದಾಳೆ, ಉಡುಪಿಯ ಈ ಪುಟ್ಟ ಹುಡುಗಿ ಸಿಂಧೂರಿ. ಈ ಪುಟಾಣಿಯ ಕಾರ್ಯಕ್ಕೆ ಸಿಎಂ ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಕಲ್ಯಾಣಪುರದ ಸುಧೀರ್ ಮತ್ತು ರೇಣುಕಾ ದಂಪತಿಯ ಮಗಳಾದ ಸಿಂಧೂರಿ ಮನೆಯಲ್ಲೇ ಕುಳಿತು ಮಾಸ್ಕ್ ಹೊಲಿಯುತ್ತಾ, ತನ್ನಿಂದಾದ ನೆರವನ್ನು ಚಾಚಿದ್ದಾಳೆ. ಇವಳ ಬಲಗೈ ಸದೃಢವಾಗಿದ್ದು, ಎಡಗೈ ಶಕ್ತಿಹೀನವಾಗಿದೆ. ಕಲ್ಯಾಣಪುರದ ಮೌಂಟ್ ರೋಸರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸಿಂಧೂರಿ ಓದಿನಲ್ಲೂ ಮುಂದು. ಸದ್ಯಕ್ಕೆ ಶಾಲೆಗೆ ರಜೆ ಇರುವುದರಿಂದ ಕೊರೋನಾ ವೇಳೆಯಲ್ಲಿ ಬೇಕಾಗುವ ಮಾಸ್ಕ್ ಹೊಲಿಯುವ ಮೂಲಕ ತನ್ನ ಕೈಲಾದ ಸೇವೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲೂ ಈಕೆಯ ಕಾರ್ಯ ಭಾರೀ ಸದ್ದು ಮಾಡಿದೆ.
