ಬೆಂಗಳೂರು: ಕೊರೋನಾ ಮಹಾಮಾರಿಯ ಮಧ್ಯೆ ರಾಜ್ಯ ವಿಧಾನಮಂಡಲದ ಅಧಿವೇಶನ ಇಂದು ಆರಂಭವಾಗಲಿದೆ. ಸದನದಲ್ಲಿ ಸಾಮಾಜಿಕ ಅಂತರ ಪಾಲನೆಯ ಖಾತರಿ ಸೇರಿದಂತೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಎಲ್ಲ ಶಾಸಕರು ಕೋವಿಡ್ ಪರೀಕ್ಷೆಗೆ ಕಡ್ಡಾಯವಾಗಿ ಒಳಪಡಬೇಕಾಗಿದೆ. ನೆಗೆಟಿವ್ ವರದಿ ಇದ್ದ ಶಾಸಕರಿಗೆ ಮಾತ್ರ ಕಲಾಪದಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ.
ಬೆಂಗಳೂರು ಗಲಭೆ, ಜಿಎಸ್ ಟಿ ಪಾಲು ವಿಳಂಬ ಹೀಗೆ ಹತ್ತು ಹಲವು ವಿಷಯಗಳ ಕುರಿತು ಸದನದಲ್ಲಿ ಗಂಭೀರ ಚರ್ಚೆ ನಡೆಯುವ ಸಾಧ್ಯತೆಯಿದೆ.
ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವರಾದ ಭೈರತಿ ಬಸವರಾಜ್, ಗೋಪಾಲಯ್ಯ ಮತ್ತು ಪ್ರಭು ಚೌಹಾಣ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕೊರೋನಾ ಸೋಂಕಿಗೆ ತುತ್ತಾಗಿರುವ ಸಚಿವರು ಈ ಅಧಿವೇಶನದಿಂದ ದೂರ ಉಳಿಯಲಿದ್ದಾರೆ.
ರಾಜ್ಯದಲ್ಲಿ 70ಕ್ಕೂ ಹೆಚ್ಚು ಶಾಸಕರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅಧಿವೇಶನವನ್ನು ಮೊಟಕುಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಸರ್ಕಾರ ಅಧಿವೇಶನ ಮೊಟಕುಗೊಳಿಸಿ ಪಲಾಯನ ಮಾಡಲು ಅವಕಾಶ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ, ಕೆ, ಶಿವಕುಮಾರ್ ಹೇಳಿದ್ದಾರೆ