ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭಾನುವಾರ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಣಿಪಾಲ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಯಡಿಯೂರಪ್ಪ ಅವರಲ್ಲಿ ಕೊರೊನಾವೈರಸ್’ನ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲದಿರುವುದು ಆರೋಗ್ಯ ಇಲಾಖೆಯನ್ನು ಚಿಂತೆಗೀಡುಮಾಡಿದೆ.
ಕೊರೊನಾ ವೈರಸ್ ಸೋಂಕು ತಡೆಯಲು ಕಟ್ಟುನಿಟ್ಟಿನ ಮುನ್ನೆಚ್ಚರಿಕೆಯನ್ನು ಸಿಎಂ ಯಡಿಯೂರಪ್ಪ ಅವರು ತೆಗೆದುಕೊಂಡಿದ್ದರು. ಎಲ್ಲಿಗೆ ಹೋದರೂ ಸದಾ ಮಾಸ್ಕ್ ಧರಿಸಿರುತ್ತಿದ್ದರು. ಅದರೊಂದಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಂಡಿದ್ದರು. ಆದರೂ ಸಿಎಂ ಅವರಿಗೆ ಕೋವಿಡ್ ಸೋಂಕು ತಗುಲಿರುವುದರ ಮೂಲ ಪತ್ತೆ ಹಚ್ಚುವುದು ರಾಜ್ಯ ಆರೋಗ್ಯ ಇಲಾಖೆಗೆ ತಲೆನೋವಾಗಿದೆ.
ಸಿಎಂ ಕುಟುಂಬದ ಸದಸ್ಯರಿಗೆ ಆಂಟಿಜೆನ್ ಟೆಸ್ಟ್
ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಸಾರ್ವಜನಿಕರ ಭೇಟಿಯನ್ನೂ ನಿರ್ಬಂಧಿಲಾಗಿತ್ತು. ಬಹುತೇಕ ಕಾರ್ಯಕ್ರಮ, ಸಭೆಗಳನ್ನು ಆನ್ಲೈನ್ ಮೂಲಕವೇ ನಡೆಸುತ್ತಿದ್ದರು. ಕಳೆದ ಮಾರ್ಚ್’ನಿಂದಲೇ ಜಿಲ್ಲಾ ಪ್ರವಾಸಗಳನ್ನು ಮುಖ್ಯಮಂತ್ರಿಗಳು ರದ್ದು ಮಾಡಿದ್ದರು. ಸರ್ಕಾರದ ಒಂದು ವರ್ಷದ ಕಾರ್ಯಕ್ರಮದಲ್ಲೂ ವೇದಿಕೆ ಮೇಲೆ ಒಬ್ಬರೇ ಇದ್ದರು. ಕರ್ನಾಟಕ ವಿದ್ಯುನ್ಮಾನ ಅಭಿವೃದ್ಧಿ ನಿಗಮ ಆಯೋಜಿಸಿದ್ದ ಕಾರ್ಯಕ್ರಮದಲ್ಲೂ ಸೂಕ್ತ ಮುಂಜಾಗ್ರತೆ ವಹಿಸಲಾಗಿತ್ತು. ಜತೆಗೆ ಸಿಎಂ ಭದ್ರತೆಯನ್ನು ನೋಡಿಕೊಳ್ಳುವ ಸಿಬ್ಬಂದಿ ಕಡ್ಡಾಯವಾಗಿ ಸೀಲ್ಡ್, ಕೈಗವಸು ಹಾಕಿಕೊಳ್ಳುತ್ತಿದ್ದರು. ಅಲ್ಲದೆ, ಭದ್ರತಾ ಸಿಬ್ಬಂದಿ ಆಗಾಗ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದರು.
ಬೊಮ್ಮಾಯಿ, ಸೋಮಣ್ಣ, ಕಾರಜೋಳ ನೆಗೆಟಿವ್ ವರದಿ
ಎಲ್ಲ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂಬುದೇ ತಿಳಿಯದೆ ಅಧಿಕಾರಿ ವಲಯ ಪರದಾಡುತ್ತಿದೆ. ಸಿಎಂ ಅವರ ಸೋಂಕಿನ ಮೂಲ ಪತ್ತೆಹಚ್ಚಲು ಆರೋಗ್ಯ ಇಲಾಖೆ ಪ್ರಯತ್ನ ಮುಂದುವರಿಸಿದೆ.