* ಅಂತರವಳ್ಳಿಯಲ್ಲಿ ನಡೆದಿದೆ ಅವಾಂತರ
ರಾಣೆಬೆನ್ನೂರು: ಕೊರೋನಾ ಕಾಲದಲ್ಲಿ ನಡೆದ ಮದುವೆಯೊಂದು ವರನ ತಂದೆ ಹಾಗೂ ವಧುವಿನ ತಾಯಿ ಪ್ರಾಣಕ್ಕೆ ಕುತ್ತು ತಂದ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ.
ರಾಣೆಬೆನ್ನೂರಿನ ಮಾರುತಿನಗರದ 55 ವರ್ಷದ ವ್ಯಕ್ತಿಯೊರ್ವರು ಜೂನ್ 29ರಂದು ಮಗನ ವಿವಾಹ ಮಾಡಿದ್ದರು. ಅಂದೇ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷೆ ವೇಳೆ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬದ ಸದಸ್ಯರಿಗೂ ಕೊರೋನಾ ಪರೀಕ್ಷೆ ನಡೆಸಲಾಗಿತ್ತು.
ವರನ ತಂದೆ, ವಧುವಿನ ತಾಯಿ ಸಾವು:
ಈ ಮಧ್ಯೆ, ವರನ ತಂದೆ ಕೊರೋನಾ ಚಿಕಿತ್ಸೆ ಫಲಕಾರಿಯಾಗದೆ ಜುಲೈ 7ರಂದು ಸಾವನ್ನಪ್ಪಿದ್ದು, ಜುಲೈ 11ರಂದು ವಧುವಿನ ತಾಯಿ ಕೂಡ ಕೊರೋನಾದಿಂದ ಸಾವನ್ನಪ್ಪಿದ್ದಾರೆ.
ವರನ ಕುಟುಂಬದ 38 ಜನರನ್ನು ಅಂತರವಳ್ಳಿಯ ಸರ್ಕಾರಿ ಹಾಸ್ಟೆಲ್’ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೇ ಕೊರೋನಾ ಟೆಸ್ಟ್’ಗೆ ಒಳಪಡಿಸಲಾಗಿತ್ತು. ಈ ಪೈಕಿ 32 ಜನರಿಗೆ ಈಗಾಗಲೇ ಸೋಂಕು ದೃಢಪಟ್ಟಿದ್ದು 6 ಜನರ ವರದಿ ಬರಬೇಕಿದೆ.
ಇನ್ನು, ವಧುವಿನ ಕುಟುಂಬದಲ್ಲೂ ಹಲವರು ಕೊರೋನಾ ಟೆಸ್ಟ್’ಗೆ ಒಳಗಾಗಿದ್ದು, ರಿಪೋರ್ಟ್’ಗಾಗಿ ಕಾಯುತ್ತಿದ್ದಾರೆ.
ಆರಂಭದಿಂದಲೂ ಒಂದೆರಡು ಪ್ರಕರಣಗಳು ಮಾತ್ರ ಕಾಣಿಸಿಕೊಂಡಿದ್ದ ರಾಣೆಬೆನ್ನೂರಿನಲ್ಲಿ ಒಂದೇ ಬಾರಿಗೆ 32 ಪ್ರಕರಣಗಳು ಕಾಣಿಸಿಕೊಂಡ ಹಿನ್ನೆಲೆ ಸಾರ್ವಜನಿಕರು ಕಂಗಾಲಾಗಿದ್ದಾರೆ. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರೆಂದು ತಿಳಿದುಬಂದಿದೆ.