ಬೆಂಗಳೂರು: ಕೊರೋನಾ ಆತಂಕ ಮುಗಿದ ನಂತರವೂ ಪದವಿ ಶಿಕ್ಷಣವನ್ನು ಹಂತ ಹಂತವಾಗಿ ಆನ್ಲೈನ್ ವ್ಯವಸ್ಥೆಗೆ ಬದಲಿಸುವ ಪ್ರಯತ್ನ ನಡೆದಿದೆ.
ಪದವಿ ಶಿಕ್ಷಣದಲ್ಲಿ ಆನ್ಲೈನ್ ಬೋಧನೆ ಮತ್ತು ಕಲಿಕೆ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ.
ಆನ್ಲೈನ್ ಶಿಕ್ಷಣದಿಂದ ವೆಚ್ಚ ಕಡಿಮೆ ಮಾಡಬಹುದು. ಸುಲಭವಾಗಿ ನಿರ್ವಹಣೆ ಮಾಡಬಹುದು ಎಂಬ ಕಾರಣಕ್ಕೆ ಮುಂದಿನ ದಿನಗಳಲ್ಲಿ ತರಗತಿ ಶಿಕ್ಷಣದ ಜತೆಗೆ ಆನ್ಲೈನ್ ಬೋಧನೆಯನ್ನು ಕಡ್ಡಾಯ ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಆನ್ಲೈನ್ ಬೋಧನೆಯನ್ನು ಶಿಕ್ಷಣದ ಒಂದು ಭಾಗವಾಗಿ ಮುಂದುವರಿಸುವ ಬಗ್ಗೆ ಪ್ರಸ್ತಾವನೆಗಳು ಸಿದ್ಧವಾಗುತ್ತಿವೆ. ಗ್ರಾಮೀಣ ಭಾಗದಲ್ಲಿರುವ ನೆಟ್ವರ್ಕ್ ಮತ್ತು ರೀಚಾರ್ಜ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೂಡ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.
ಈಗಾಗಲೇ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲೂ ಆನ್ಲೈನ್ ಬೋಧನೆ ಮತ್ತು ಕೆಲವು ಸರ್ಕಾರಿ ವೆಬ್ಸೈಟ್ ಮೂಲಕ ಕಲಿಕಾ ಸಾಮಗ್ರಿ ಒದಗಿಸಲಾಗುತ್ತಿದೆ. ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿ.ವಿ.ಗಳಲ್ಲೂ ಆನ್ಲೈನ್ ಬೋಧನೆ ನಡೆಯುತ್ತಿದೆ. ಇದನ್ನೇ ಇನ್ನಷ್ಟು ಅಭಿವೃದ್ಧಿಪಡಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಈಗಾಗಲೇ ಪ್ರವೇಶ ಪ್ರಕ್ರಿಯೆ, ಫಲಿತಾಂಶ ಪ್ರಕಟನೆ ಆನ್ಲೈನ್ ಆಗಿವೆ. ಬೋಧನೆಯನ್ನು ಹಂತಹಂತವಾಗಿ ಅನುಷ್ಠಾನಿಸಲಾಗುತ್ತದೆ. ಶೇ.20ರಷ್ಟು ಅಳವಡಿಸಿಕೊಂಡು ಕೆಲ ವಿಷಯಗಳಿಗೆ ತರಗತಿ ಬೋಧನೆ ಮುಂದುವರಿಸಲು ಯೋಜನೆ ಸಿದ್ಧವಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.