newsics.com
ಮೈಸೂರು: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಜೋಡಿಸಿರುವ ರತ್ನಖಚಿತ ಸಿಂಹಾಸನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.
ಪ್ರತಿವರ್ಷ ದಸರಾ ಆರಂಭಕ್ಕೆ ಕೆಲವೇ ದಿನಗಳಿರುವಾಗ ಸಿಂಹಾಸನದ ಜೋಡಣೆ ನಡೆಯುತ್ತದೆ. ಈ ಬಾರಿ ಅಧಿಕ ಮಾಸ ಹಿನ್ನೆಲೆಯಲ್ಲಿ ಒಂದು ತಿಂಗಳು ಮುಂಚಿತವಾಗಿಯೇ ಜೋಡಣೆ ಮಾಡಲಾಗಿದೆ. ಅರಮನೆ ಪ್ರವೇಶಕ್ಕೆ 70 ರೂ.(ವಯಸ್ಕರು), ಮಕ್ಕಳಿಗೆ 35 ರೂ. ವಿಧಿಸಿದರೆ ಸಿಂಹಾಸನ ವೀಕ್ಷಣೆಗೆ 50 ರೂ.ಶುಲ್ಕ ವಿಧಿಸಲಾಗುತ್ತದೆ.
ಜಿಲ್ಲಾ ಖಜಾನೆಯಲ್ಲಿದ್ದ ಈ ಸಿಂಹಾಸನವನ್ನು ದರ್ಬಾರ್ ಹಾಲ್’ನಲ್ಲಿ ಜೋಡಿಸಿಡಲಾಗಿದೆ. ಸಿಂಹಾಸನದ ಛಾಯಾಚಿತ್ರ, ವಿಡಿಯೋ ತೆಗೆಯುವುದನ್ನು ನಿಷೇಧಿಸಲಾಗಿದೆ.
ದಸರಾ ಮಹೋತ್ಸವ ಉದ್ಘಾಟಕರಾಗಿ ಹೃದಯರೋಗ ತಜ್ಞ ಡಾ.ಮಂಜುನಾಥ್ ಆಯ್ಕೆ
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ನಾಡಹಬ್ಬವನ್ನು ಚಾಮುಂಡಿ ಬೆಟ್ಟ ಮತ್ತು ಅರಮನೆ ಆವರಣಕ್ಕೆ ಸೀಮಿತಗೊಳಿಸಲಾಗಿದ್ದು, ದಸರಾ ಮಹೋತ್ಸವ ಅ.17 ರಂದು ಆರಂಭವಾಗಿ, ಅ.26 ರಂದು ಕೊನೆಗೊಳ್ಳಲಿದೆ. ಕೊರೋನಾ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ 200 ಜನರಿಗೆ ಮಾತ್ರ ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಖಾಸಗಿ ದರ್ಬಾರ್ ನಡೆಯಲಿದ್ದು, ಅಕ್ಟೋಬರ್ 25 ರಂದು ಆಯುಧ ಪೂಜೆ, ಸಾಂಪ್ರದಾಯಿಕ ಜಟ್ಟಿ ಕಾಳಗ, 26 ರಂದು ಶಮೀಪೂಜೆ, ವಿಜಯದಶಮಿ ಮೆರವಣಿಗೆ ನಡೆಯಲಿದೆ.