ಬೆಂಗಳೂರು: ಕೊರೋನಾ ಮಹಾ ಮಾರಿಯ ಮಧ್ಯೆ ಕೂಡ ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದ ಕೆಲವು ವಿದೇಶಿಯರಿಗೆ ಪೊಲೀಸರು ಶಿಸ್ತಿನ ಪಾಠ ಕಲಿಸಿದ್ದಾರೆ. ಬೆಂಗಳೂರಿನ ಹೆಣ್ಣೂರು, ಬಾಣಸವಾಡಿ ಮತ್ತು ಕೊತ್ತನೂರಿನಲ್ಲಿ ವಾಸಿಸುತ್ತಿರುವ ವಿದೇಶಿಯರ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ಅಪಾರ ಪ್ರಮಾಣದ ನಕಲಿ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿ ಹೆಚ್ಚಾಗಿ ವಾಸಿಸುತ್ತಿರುವ ನೈಜೇರಿಯಾ ದೇಶದ ನಿವಾಸಿಗಳು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಇದನ್ನು ಪ್ರಶ್ನಿಸಲು ಹೋದ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಅಪರಾಧ ಪತ್ತೆ ದಳ , (ಸಿಸಿಬಿ) ದಾಳಿ ನಡೆಸಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಇದರ ನೇತೃತ್ವ ವಹಿಸಿದ್ದರು. 120 ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಶೋಧ ಸಂದರ್ಭದಲ್ಲಿ 85ಕ್ಕೂ ಹೆಚ್ಚು ಮಂದಿಯನ್ನು ವಿಚಾರಣಗೆ ಗುರಿಪಡಿಸಲಾಗಿದೆ. ಅವರಲ್ಲಿ ಏಳು ಮಂದಿ ಸೂಕ್ತ ದಾಖಲೆ ಪತ್ರಗಳಿಲ್ಲದೆ ಭಾರತದಲ್ಲಿ ವಾಸಿಸುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ.
ಭಾರತ, ಅಮೆರಿಕ ಮತ್ತು ಬ್ರಿಟನ್ ನ ನಕಲಿ ಕರೆನ್ಸಿಗಳನ್ನು ಕೂಡ ಇದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.