ಕರ್ನಾಟಕ ರಾಜ್ಯ 2019ರಲ್ಲಿ ಹಲವು ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಅನಿಶ್ಚಿತತೆಯ ನದಿಯಲ್ಲಿ ಮುಳುಗೇಳುತ್ತಾ ಸಾಗುತ್ತಿದ್ದ ಸಮ್ಮಿಶ್ರ ಸರ್ಕಾರದ ದೋಣಿ, ಕೊನೆಗೂ 15 ಶಾಸರ ರಾಜೀನಾಮೆಯಿಂದ ಮೇಲೇಳಲಾರದಂತೆ ಮುಳುಗಿಹೋಯಿತು. ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್ ಸರ್ಕಾರ ವಿಶ್ವಾಸ ಮತ ಯಾಚನೆಯಲ್ಲಿ ಸೋಲು ಅನುಭವಿಸಿತು. ಈ ನಡುವೆ ರಾಜೀನಾಮೆ ನೀಡಿದ 15 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದರು. ಇದರಿಂದ ಬಿಜೆಪಿ ಅನಾಯಾಸವಾಗಿ ಸರ್ಕಾರ ರಚಿಸಿ, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಆದರೆ, ಅಧಿಕಾರಕ್ಕೇರುತ್ತಿದ್ದಂತೆ, ಉತ್ತರ ಕರ್ನಾಟಕ ಮತ್ತು ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಾಣದ ಪ್ರವಾಹ ಉಂಟಾಗಿ, ಸಾವಿರಾರು ಜನರು ನಿರಾಶ್ರಿತರಾದರು.
ಯಡಿಯೂರಪ್ಪ ಅವರಿಗೆ ಪರಿಹಾರದ ಸವಾಲು ಎದುರಾಯಿತು.
ಸಂಪುಟ ರಚನೆಗೆ ಮುನ್ನವೇ ಏಕಾಂಗಿಯಾಗಿ ನೆರೆ ಪರಿಸ್ಥಿತಿಯನ್ನು ನಿರ್ವಹಿಸುವ ಸಂಕಷ್ಟಕ್ಕೆ ಸಿಲುಕಿದರು. ಕೇಂದ್ರದಿಂದ ಹಣದ ನೆರವು ನಿರೀಕ್ಷೆಯಂತೆ ಬರದಿದ್ದುದು ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಿತು. ಇದೆಲ್ಲದರ ನಡುವೆ ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿತು. ಸ್ಪರ್ಧಿಸಿದ 13 ಅನರ್ಹರಲ್ಲಿ 11 ಶಾಸಕರು ಜಯ ಗಳಿಸಿದರು.
ಎಂ.ಟಿ.ಬಿ. ನಾಗರಾಜ್ ಮತ್ತು ಎಚ್.ವಿಶ್ವನಾಥ್ ಹೀನಾಯ ಸೋಲು ಅನುಭವಿಸಿದರು. ಆದರೆ, ಗೆದ್ದವರು ಚುನಾವಣೆಯಲ್ಲಿ ಗೆದ್ದರೂ ಸಂಪುಟ ವಿಸ್ತರಣೆಗೆ ಇನ್ನೂ ಮುಹೂರ್ತ ಕೂಡಿಬರದ ಹಿನ್ನೆಲೆಯಲ್ಲಿ ಇನ್ನೂ ಮಂತ್ರಿ ಪದವಿಯ ನಿರೀಕ್ಷೆಯಲ್ಲೇ ಇದ್ದಾರೆ.
ಜನವರಿ 21ರಂದು ತ್ರಿವಿಧ ದಾಸೋಹಿ, ಕಾಯಕ ಯೋಗಿ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ (111) ಲಿಂಗೈಕ್ಯರಾದರು. ಫೆ.19ರಂದು ಬೆಂಗಳೂರಿನ ಯಲಹಂಕದಲ್ಲಿ ನಡೆದ ವೈಮಾನಿಕ ಪ್ರದರ್ಶನ, ಏರ್ ಶೋ -2019ರ ವಾಹನ ನಿಲುಗಡೆ ಪ್ರದೇಶದಲ್ಲಿ ಅಗ್ನಿ ಆಕಸ್ಮಿಕ ಕಾಣಿಸಿಕೊಂಡು, 300ಕ್ಕೂ ಹೆಚ್ಚು ಕಾರುಗಳು ಭಸ್ಮವಾದವು. ಮೇ 2ರಂದು ನಾಡು ಕಂಡ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಕೊನೆಯುಸಿರೆಳೆದರು. ಜೂನ್ 10ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ನಿಧನರಾದರೆ, ಡಿಸೆಂಬರ್ 29ರಂದು ವಿಶ್ವಗುರು ಪೇಜಾವರ ಶ್ರೀಗಳು ವಿಷ್ಣುಪಾದ ಸೇರಿದರು.
ಬರ, ನೆರೆಯನ್ನೇ ಮರೆಮಾಚಿದ ರಾಜಕೀಯ
Follow Us