newsics.com
ಮೈಸೂರು: ನಗರದ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಿವೇದಿತಾ ನಗರದಲ್ಲಿ ಒಂಟಿಯಾಗಿ ವಾಸವಿದ್ದ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೃತಪಟ್ಟವರನ್ನು ಪರಶಿವಮೂರ್ತಿ (67) ಎಂದು ಗುರುತಿಸಲಾಗಿದೆ. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಇವರು ಪತ್ನಿಯಿಂದ ಪ್ರತ್ಯೇಕವಾಗಿ ಒಬ್ಬರೇ ವಾಸವಿದ್ದರು.
ಮೂಲತಃ ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದವರಾದ ಪರಶಿವಮೂರ್ತಿ ಮೈಸೂರಿನ ಕುವೆಂಪುನಗರ ಪಿಯು ಕಾಲೇಜು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಹಾಸನದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿವೃತ್ತರಾಗಿದ್ದರು.
ಬಡ್ಡಿ ವ್ಯವಹಾರ ನಡೆಸುತ್ತಿದ್ದ ಪರಶಿವಮೂರ್ತಿ ಭಾನುವಾರ ಸಂಜೆ ಮನೆಯಲ್ಲಿದ್ದರು. ಸಂಜೆ 6.30ರ ಸಮಯದಲ್ಲಿ ಮನೆಗೆ ಯಾರೋ ಇಬ್ಬರು ಪರಿಚಯಸ್ಥರು ಬಂದಿದ್ದಾರೆ. ಕೆಲ ಹೊತ್ತು ಮನೆಯಲ್ಲಿ ಏನೋ ಮಾತುಕತೆ ನಡೆದಿದೆ. ಸಂಜೆ 7.45 ಸಮಯದಲ್ಲಿ ಇಬ್ಬರು ಸೇರಿ ಪರಶಿವಮೂರ್ತಿ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ಅವರು ಕಿರುಚಿಕೊಂಡಿದ್ದು, ಆ ಇಬ್ಬರೂ ಪರಾರಿಯಾಗಿದ್ದಾರೆ. ಕಿರುಚಿಕೊಂಡ ಶಬ್ದ ಕೇಳಿ ಪಕ್ಕದ ಮನೆಯವರು ಬಂದು ನೋಡುವ ಹೊತ್ತಿಗೆ ಪರಶಿವಮೂರ್ತಿ ಮೃತಪಟ್ಟಿದ್ದರು ಎಂದು ಅಕ್ಕಪಕ್ಕದ ನಿವಾಸಿಗವು ತಿಳಿಸಿದ್ದಾರೆ.
ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸಂಬಂಧಿಕರೇ ಈ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ
Follow Us