newsics.com
ಬೆಂಗಳೂರು: ತೈಲಬೆಲೆಯ ಏರಿಕೆಯಿಂದಾಗಿ ಸಾಗಣೆ ವೆಚ್ಚ ಹೆಚ್ಚಿದ್ದರಿಂದ ಅಕ್ಕಿಯ ಬೆಲೆ ಕ್ಬಿಂಟಾಲ್’ಗೆ 200 ರೂ. ಹೆಚ್ಚಳವಾಗಿದೆ.
ಬಾಸುಮತಿ ಅಕ್ಕಿ ಸೇರಿದಂತೆ ಉಳಿದೆಲ್ಲ ಬಗೆಯ ಅಕ್ಕಿ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಆದರೆ ಉತ್ತರ ಕರ್ನಾಟಕ ಕಡೆಯಿಂದ ಪೂರೈಕೆಯಾಗುವ ಸೋನ ಮಸೂರಿ, ಕೋಲಂ, ಸ್ಟೀಮ್ ರೈಸ್ ಮತ್ತಿತರ ಬಗೆಯ ಅಕ್ಕಿ ಪ್ರತಿ ಕ್ವಿಂಟಾಲ್ ಗೆ ಈ ಮೊದಲಿನ ನಿಗದಿತ ದರಕ್ಕಿಂತ 200 ರೂ. ಏರಿಕೆಯಾಗಿದೆ.
ಲಾಕ್’ಡೌನ್ ತೆರವಾಗುತ್ತಿದ್ದಂತೆ ಅಕ್ಕಿ ದರ ಏರಿಕೆ ಗಮನಕ್ಕೆ ಬಂದಿದ್ದು, ಬೆಂಗಳೂರಿನ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈ ಹಿಂದೆ ಕೋಲಂ (ಬುಲೆಟ್ ರೈಸ್ )ಅಕ್ಕಿ ಬೆಲೆ ಕೆ.ಜಿ.ಗೆ 68 ರೂ.ಆಗಿತ್ತು. ಆದರೆ ಗುರುವಾರ ಅದು 70ರೂ.ಗೆ ಮಾರಾಟವಾಗಿದೆ. 48 ರೂ. ಇದ್ದ ಸೋನ ಮಸೂರಿ ಈಗ ಕೆ.ಜಿಗೆ 50 ರೂ.ಆಗಿದೆ. ಜತೆಗೆ ಸ್ಟೀಮ್ ರೈಸ್ ಕೆ.ಜಿ.ಗೆ 44 ರೂ.ಇತ್ತು. ಅದು ಈಗ 46 ರೂ.ಗೆ ಏರಿಕೆಯಾಗಿದೆ.
ರಾಯಚೂರು ಮೂಲದ ಸೋನ ಮಸೂರಿ ಸೇರಿದಂತೆ ಇನ್ನಿತರ ಅಕ್ಕಿಯ ಬೆಲೆಯಲ್ಲಿ ಕ್ವಿಂಟಲ್‌ಗೆ 200 ರೂ. ಹೆಚ್ಚಳವಾಗಿದೆ ಎಂದು ಬೆಂಗಳೂರು ಗ್ರೇನ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ರಸನ್ನ ಕುಮಾರ್ ಹೇಳಿದ್ದಾರೆ.
ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಅಧಿಕ ಪ್ರಮಾಣದಲ್ಲಿ ಬೇಳೆಕಾಳು ರಫ್ತಾಗುತ್ತಿರುವುದರಿಂದ ಕೆಲವು ಆಹಾರ ಧಾನ್ಯಗಳ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಉದ್ದಿನಬೆಳೆ ಈ ಹಿಂದೆ ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆ.ಜಿಗೆ 105ರೂ.ಇತ್ತು ಅದು ಈಗ 90 ರೂ.ಗೆ ಇಳಿದಿದೆ. ತೊಗರಿಬೇಳೆ ಕೆ.ಜಿ.ಗೆ 100 ರೂ.ಇತ್ತು. ಅದೀಗ 92 ರೂ ಆಗಿದೆ. ಹೆಸರು ಬೇಳೆ 98 ರೂ.ದಿಂದ 90 ರೂ.ಗೆ ಇಳಿದಿದೆ. ಹಾಗೆಯೇ ಹೆಸರು ಕಾಳು 85 ರೂದಿಂದ 75 ರೂ.ಗೆ ಇಳಿಕೆಯಾಗಿದೆ.