newsics.com
ಕೊಪ್ಪಳ: ವಾಹನಗಳ ಚಾಲಕರಿಂದ ಅಕ್ರಮವಾಗಿ ಹಣ ವಸೂಲು ಮಾಡುತ್ತಿದ್ದ ಆರ್ಟಿಒ ಅಧಿಕಾರಿಗಳು ಮಾಧ್ಯಮಗಳ ಕ್ಯಾಮೆರಾಗಳನ್ನು ಕಂಡು ರಾಷ್ಟ್ರೀಯ ಹೆದ್ದಾರಿ 50ರಲ್ಲಿ ದಿಕ್ಕಾಪಾಲಾಗಿ ಓಡಿ ಹೋದರು.
ಗಂಗಾವತಿ ತಾಲ್ಲೂಕಿನ ಅಂಜನಾದ್ರಿಗೆ ಶುಕ್ರವಾರ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಭೇಟಿ ನೀಡಿದ್ದರು. ಈ ಕಾರ್ಯಕ್ರಮದ ವರದಿಗೆ ತೆರಳಿ ವಾಪಸ್ ಬರುವಾಗ ವಾರ್ತಾ ಇಲಾಖೆಯ ವಾಹನವನ್ನು ಅಧಿಕಾರಿಗಳು ತಡೆದು ನಿಲ್ಲಿಸಿದರು. ಯಾಕೆಂದು ಪ್ರಶ್ನಿಸಿದಾಗ ಏನೂ ಉತ್ತರಿಸಲಿಲ್ಲ.
ಇದೇ ವೇಳೆ ಆರ್ಟಿಒ ಕಚೇರಿಯ ಬ್ರೇಕ್ ಇನ್ಸ್ಟೆಕ್ಟರ್ ಜವರೇಗೌಡ ಅವರಿಗೆ ಲಾರಿ ಚಾಲಕನೊಬ್ಬ ₹50 ಕೊಡಲು ಬಂದಾಗ ಮಾಧ್ಯಮ ಪ್ರತಿನಿಧಿಗಳು ಕ್ಯಾಮೆರಾದಲ್ಲಿ ಅದನ್ನು ದಾಖಲಿಸಲು ಮುಂದಾದರು. ಇದನ್ನು ಕಂಡ ಆರ್ಟಿಒ ಸಿಬ್ಬಂದಿ ಗಲಿಬಿಲಿಗೊಂಡು ರಸ್ತೆಯ ಪಕ್ಕದಲ್ಲಿದ್ದ ಹೊಲದಲ್ಲಿ ಓಡಿ ಹೋದರು.