ಬೆಂಗಳೂರು: ಮಾದಕ ದ್ರವ್ಯ ಜಾಲದ ನಂಟು ಹೊಂದಿರುವ ಆರೋಪಕ್ಕೆ ಗುರಿಯಾಗಿರುವ ನಟಿ ಸಂಜನಾ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಸಂಜನಾ ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ.
ಇಂದು ನ್ಯಾಯಾಲಯದಿಂದ ಜಾಮೀನು ದೊರೆಯುವ ವಿಶ್ವಾಸವನ್ನು ಸಂಜನಾ ಪರ ವಕೀಲರು ವ್ಯಕ್ತಪಡಿಸಿದ್ದಾರೆ. ಪೊಲೀಸರು ದಾಖಲಿಸಿರುವ ಪ್ರಥಮ ಮಾಹಿತಿ ವರದಿಯಲ್ಲಿ ಸಂಜನಾ ಅವರ ಹೆಸರಿಲ್ಲ ಎಂದು ಸಂಜನಾ ಪರ ವಕೀಲರು ವಾದ ಮಂಡಿಸಿದ್ದಾರೆ.
ಇದೇ ವೇಳೆ ಸಂಜನಾ ಅವರ ಜಾಮೀನು ಅರ್ಜಿಯನ್ನು ಸಿಸಿಬಿ ಬಲವಾಗಿ ವಿರೋಧಿಸುವ ಸಾಧ್ಯತೆಯಿದೆ. ಬಂಧಿತ ಆರೋಪಿಗಳ ಪೈಕಿ ಸಂಜನಾ ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಎಂಬುದು ಇದುವರೆಗಿನ ತನಿಖೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶಮಾಡುವ ಸಾಧ್ಯತೆಯಿದೆ ಎಂಬ ವಾದವನ್ನು ಸಿಸಿಬಿ ಮಂಡಿಸುವ ಸಾಧ್ಯತೆಯಿದೆ