ಬೆಂಗಳೂರು: ಇತ್ತೀಚೆಗೆ ಜನರು ಪರಿಸರ ಸ್ನೇಹಿ ಬದುಕಿಗೆ ಮರಳುತ್ತಿದ್ದಾರೆ. ಪರಿಸರ ಸ್ನೇಹಿ ಗಣಪತಿ, ಇಕೋಪ್ರೆಂಡ್ಲಿ ಬ್ಯಾಗ್, ಬಟ್ಟೆ, ಪ್ಯಾಡ್ ಹೀಗೆ ಎಲ್ಲವೂ ಮಣ್ಣಲ್ಲಿ ಮಣ್ಣಾಗುವಂತದ್ದೇ ಮಾರುಕಟ್ಟೆಗೆ ಬರ್ತಿದೆ. ಇದೀಗ ಈ ಸಾಲಿಗೆ ಸೇರಿರೋದು ಪರಿಸರ ಸ್ನೇಹಿ ರಾಖಿ.
ಮಣ್ಣಿನಲ್ಲಿ ಮಣ್ಣಾಗುವ ದಪ್ಪನೆಯ ಪೇಪರ್ ಒಳಕ್ಕೆ ತರಕಾರಿ, ಹೂ, ಹಣ್ಣಿನ ಬೀಜ ಇಟ್ಟು ಅದನ್ನು ಹೂವಿನ ಎಸಳಿನ ಆಕಾರದಲ್ಲಿ ಕತ್ತರಿಸಿ ಹೂವು ತಯಾರಿಸಿ ಅದಕ್ಕೆ ಸೆಣಬು ಅಥವಾ ಗೋಣಿಯ ದಾರ ಜೋಡಿಸಿ ರಾಖಿ ಸಿದ್ಧಪಡಿಸಲಾಗಿದೆ.
ರಾಖಿ ಕಟ್ಟಿದ ಬಳಿಕ ಈ ರಾಖಿಯನ್ನು ತೆಗೆದು ಮಣ್ಣಿನ ಕುಂಡದಲ್ಲಿ ಹಾಕಿ ನೀರುಣಿಸಿದರೆ, ಒಂದು ವಾರದಲ್ಲಿ ರಾಖಿಯೊಳಗೆ ಇದ್ದ ಸೂರ್ಯಕಾಂತಿ, ಟೊಮೆಟೊ, ತುಳಸಿ, ತರಕಾರಿ ಬೀಜಗಳು ಸಸಿಯಾಗುತ್ತವೆ.
ಸೀಡ್ ಪೇಪರ್ ಇಂಡಿಯಾ ಇಂತಹದೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು ರಾಖಿ ಗಿಫ್ಟ್ ಪ್ಯಾಕ್’ನ್ನೇ ಸಿದ್ಧಪಡಿಸಿದೆ. ಪ್ಯಾಕ್ ಒಳಕ್ಕೆ ಇಂತಹದೊಂದು ಹೂವು,bಹಣ್ಣು, ತರಕಾರಿ ಬೀಜ ಇರುವ ರಾಖಿ, ಒಣಗಿಸಿದ ಗುಲಾಬಿ ದಳದಿಂದ ಸಿದ್ಧವಾದ ಕುಂಕುಮ ಹಾಗೂ ಅಕ್ಷತೆ ಇಡಲಾಗಿದೆ.
ರಾಖಿ ಧರಿಸಿದ ಬಳಿಕ ತೆಗೆದು ನೆಡಲು ಅದರೊಳಗೆ ಪರಿಸರ ಸ್ನೇಹಿ ಕುಂಡವೂ ಇದೆ. ಈಗಾಗಲೇ ಪರಿಸರ ಸ್ನೇಹಿ ಬಾವುಟ, ಪಟಾಕಿ ತಯಾರಿಸಿದ ಸೀಡ್ ಪೇಪರ್ ಇಂಡಿಯಾಕ್ಕೆ ಸಿಕ್ಕ ಒಳ್ಳೆಯ ಪ್ರೋತ್ಸಾಹ ಈ ಪ್ರಯತ್ನಕ್ಕೆ ಧೈರ್ಯ ತುಂಬಿತು ಅಂತಾರೆ ಸಂಸ್ಥೆಯ ಮುಖ್ಯಸ್ಥ ರೋಶನ್ .
ರಾಖಿ ತಯಾರಿಕೆಗೆ ನೈಸರ್ಗಿಕವಾದ ಟೊಮೆಟೊ, ಬೀಟರೂಟ್, ಅರಿಶಿನ, ಬೆರ್ರಿ ಹಣ್ಣುಗಳ ಬಣ್ಣ ಬಳಸಲಾಗಿದ್ದು, 100ರಿಂದ 250 ರೂ. ದರದಲ್ಲಿ ಲಭ್ಯವಿದೆ. ಇನ್ನೇನು ರಕ್ಷಾಬಂಧನ ಹಬ್ಬ ಹತ್ತಿರದಲ್ಲೇ ಇದೆ. ನೀವೂ ಪರಿಸರ ಸ್ನೇಹಿ ರಾಖಿ ಬಳಸಿ ಹಬ್ಬ ಆಚರಿಸಬಹುದು.